ದಾವಣಗೆರೆಯಲ್ಲಿ ಜ. 6,7ರಂದು ಏಳನೇ ರಾಜ್ಯ ಮಟ್ಟದ ಮಹಿಳಾ ಸಮ್ಮೇಳನ

ಕಲಬುರಗಿ:ಡಿ.27: ದಾವಣೆಗೆರೆಯಲ್ಲಿ 2024ರ ಜನವರಿ 6 ಮತ್ತು 7ರಂದು ಎರಡು ದಿನಗಳ ಕಾಲ ಏಳನೇ ರಾಜ್ಯ ಮಟ್ಟದ ಮಹಿಳಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಶೋಭಾ ಎಸ್., ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದಲ್ಲಿ ರಾಜ್ಯದ ವಿವಿಧೆಡೆಯಿಂದ ಸುಮಾರು 3,500 ಮಹಿಳೆಯರು ಹಾಗೂ ಪ್ರತಿನಿಧಿಗಳ ಅಧಿವೇಶನದಲ್ಲಿ 1,500 ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಿ, ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಖಚಿತಪಡಿಸುವಂತೆ, ದುಡಿಯುವ ಮಹಿಳೆಯರಿಗೆ ಕನಿಷ್ಠ ವೇತನ, ಸೇವಾ ಭದ್ರತೆ ಖಾತ್ರಿಪಡಿಸುವ ಘೋಷಣೆಯೊಂದಿಗೆ ಸಮ್ಮೇಳನ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಅತ್ಯಾಚಾರಿಗಳಿಗೆ ನಿದರ್ಶನೀಯ ಶಿಕ್ಷೆ ನೀಡುವಂತೆ, ಅಶ್ಲೀಲ ಸಿನೇಮಾ, ಸಾಹಿತ್ಯ, ಜಾಹಿರಾತು, ವೆಬ್‍ಸೈಟ್ ಹಾಗೂ ಮದ್ಯ, ಮಾದಕ ವಸ್ತುಗಳನ್ನು ನಿಷೇಧಿಸುವಂತೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣ ನಿಲ್ಲಿಸಿ ಎಲ್ಲ ಮಹಿಳೆಯರಿಗೂ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗವನ್ನು ಖಾತ್ರಿಪಡಿಸುವಂತೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಅವಶ್ಯಕ ಸೌಲಭ್ಯಗಳನ್ನು ಉಚಿತವಾಗಿ ಒದಗಿಸುವಂತೆ, ಮಹಿಳೆಯರ ಮತ್ತು ಮಕ್ಕಳಲ್ಲಿನ ಅಪೌಷ್ಠಿಕತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ, ವಿದ್ಯಾರ್ಥಿನಿಯರಲ್ಲಿನ ಅಪೌಷ್ಠಿಕತೆ ತಡೆಯಲು ಕಾಲೇಜು ಹಂತದವರೆಗೂ ಬಿಸಿಯೂಟ ವಿಸ್ತರಿಸುವಂತೆ ಅವರು ಒತ್ತಾಯಿಸಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಜುಡೋ, ಕರಾಟೆಯಂತಹ ಆತ್ಮರಕ್ಷಣಾ ಕೋರ್ಸ್‍ಗಳನ್ನು ಪ್ರಾರಂಭಿಸುವಂತೆ, ತ್ವರಿತಗತಿಯ ನ್ಯಾಯಾಲಯಗಳ ಸಂಖ್ಯೆಯನ್ನು ಹೆಚ್ಚಿಸಿ ಮತ್ತು ಕಾರ್ಯನಿರ್ವಹಣೆಯನ್ನು ಖಾತ್ರಿಪಡಿಸುವಂತೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಿ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಬಲಪಡಿಸುವಂತೆ, ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರಿಗೆ 25000ರೂ.ಗಳ ಕನಿಷ್ಠ ವೇತನ ಖಾತ್ರಿಪಡಿಸುವಂತೆ, ಎಲ್ಲ ಬಡ ಹೆಣ್ಣು ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ಸ್ಯಾನಿಟರಿ ಪ್ಯಾಡ್ ವಿತರಿಸುವಂತೆ ಅವರು ಆಗ್ರಹಿಸಿದರು.
ರಾಜ್ಯ ಮಟ್ಟದ ಸಮ್ಮೇಳನದಲ್ಲಿ ರಾಜ್ಯದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಮತಿ ಗುಂಡಮ್ಮ ಎಸ್. ಮಡಿವಾಳ್, ಅಂಬಿಕಾ ಆರ್., ಸಾಬಮ್ಮ, ಮಹಾದೇವಿ ಮಾನೆ, ಉರ್ಮಿಳಾ ಮುಂತಾದವರು ಉಪಸ್ಥಿತರಿದ್ದರು.