ದಾವಣಗೆರೆಯಲ್ಲಿ ಎತ್ತರದ ಕಟ್ಟಗಳು ನಿರ್ಮಾಣವಾಗಬೇಕಿದೆ

ದಾವಣಗೆರೆ.ಜ.೨೧ : ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ದಾವಣಗೆರೆಯಲ್ಲಿ ಮೂರು ಅಂತಸ್ತಿಗಿಂತ ಎತ್ತರದ ವಾಣಿಜ್ಯ ಕಟ್ಟಡಗಳು ಹಾಗೂ ಅಪಾರ್ಟ್ ಮೆಂಟ್ ಗಳು ಹೆಚ್ಚು ಹೆಚ್ಚು ನಿರ್ಮಾಣವಾಗ ಬೇಕಿದೆ. ಈ ನಿಟ್ಟಿನಲ್ಲಿ ನಗರದ ಎಫ.ಎ,ಆರ್ ಅಂದರೆ ಫ್ಲೋರ್ ಏರಿಯಾ ರೇಷಿಯೋ ಅನ್ನು ಹೆಚ್ಚುಗೊಳಿಸಿ ಇಲ್ಲಿನ ಇಂಜಿನಿಯರ್ ಗಳಿಗೆ ಹಾಗೂ ಕಟ್ಟಡ ನಿರ್ಮಾತೃಗಳಿಗೆ ಅನುಕೂಲವಾಗುವಂತೆ ಜನಪ್ರತಿನಿಧಿಗಳು ಸರಕಾರಕ್ಕೆ ಒತ್ತಾಯಿಸಬೇಕಿದೆ ಎಂದು ಕ್ರೆಡೈನ ನೂತನ ಅಧ್ಯಕ್ಷ ಪ್ರದೀಪ್ ರಾಯಕರ್ ಕರೆ ನೀಡಿದರು. ಅವರು ಫಾರಮ್ ಆಫ್ ಆರ್ಕಿಟೆಕ್ಟ್ಸ್ ಮತ್ತು ಕನ್ಸ್ ಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಆಯೋಜಿಸಿರುವ ಕಟ್ಟಡ ಸಾಮಾಗ್ರಿಗಳ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸ್ಮಾರ್ಟ್ ಸಿಟಿಯಾಗಿ ದಾವಣಗೆರೆ ಮಾರ್ಪಾಡುಗೊಳ್ಳುವ ಮೊದಲೇ ಈ ನಗರವನ್ನು ಸ್ಮಾರ್ಟ್ ಆಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಇತರೆ ಜನಪ್ರತಿನಿಧಿಗಳು ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈಗ ಸ್ಮಾರ್ಟ್ ಸಿಟಿಯಾಗಿ ಘೋಷಿತಗೊಂಡಿರುವ ಈ ನಗರದಲ್ಲಿ ಸಾಮಾನ್ಯ ಜನರು ಇಂದಿನ ದಿನಗಳಲ್ಲಿ ಸ್ವಂತ ನಿವೇಶನ ಕೊಂಡು ಮನೆ ಕಟ್ಟಿಸಿಕೊಳ್ಳುವುದು ಕಷ್ಟಸಾಧ್ಯ. ಆದ್ದರಿಂದ ಎತ್ತರದ ಕಟ್ಟಡಗಳು ತಲೆ ಎತ್ತಲು ಅನುಕೂಲವಾಗುವಂತಹ ಫ್ಲೋರ್ ಏರಿಯಾ ರೇಷಿಯೋ ಹೆಚ್ಚಿಸುವಲ್ಲಿ ಜನಪ್ರತಿನಿಧಿಗಳು ಸರಕಾರಕ್ಕೆ ಒತ್ತಾಯಿಸಬೇಕಿದೆ ಎಂದು ಒತ್ತಿ ಹೇಳಿದರು. ಇದರಿಂದ ಭವ್ಯವಾದ ಸುಸಜ್ಜಿತವಾದ ಎತ್ತರದ ಕಟ್ಟಡ ಕಾಮಗಾರಿಗಳು ಹೆಚ್ಚು ಆರಂಭಗೊಳ್ಳುತ್ತವೆ. ಮತ್ತು ಸಾರ್ವಜನಿಕರಿಗೆ ಕಡಿಮೆ ದರಗಳಲ್ಲಿ ಸೂರು ಸಿಗುವಂತಾಗುತ್ತದೆ ಅಭಿಪ್ರಾಯ ಪಟ್ಟರು, ಬಿಲ್ಡ್ ಮ್ಯಾಟ್ ಉದ್ಘಾಟಿಸಿ ಮಾತನಾಡಿದ ಶಾಸಕ ಶಾಮನೂರು ಶಿವಶಂಕರಪ್ಪನವರು ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಮಾಡುವುದಾಗಿ ಹೇಳಿದರು. ಕೋವಿಡ್ ಲಾಕ್ ಡೌನ್ ಗಳಿಂದಾಗಿ ಕಟ್ಟಡ ನಿರ್ಮಾಣ ಕಾರ್ಯಗಳು ಕುಂಟಿತಗೊಂಡಿದ್ದವು. ಈಗ ಈ ಕ್ಷೇತ್ರದಲ್ಲಿ ಕೆಲಸಗಳು ಚುರುಕುಗೊಂಡಿರುವುದು ಆಶಾದಾಯಕವಾಗಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಯನಿರತ ಸಿವಿಲ್ ಇಂಜಿನನನಿಯರ್ ಗಳ ಒಕ್ಕೂಟ ಕಟ್ಟಡ ಸಾಮಾಗ್ರಿಗಳ ವಸ್ತು ಪ್ರದರ್ಶನ ಏರ್ಪಡಿಸಿ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ನೀಡುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.ಇನ್ನೋರ್ವ ಅತಿಥಿ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಮಾತನಾಡಿ ಕಳೆದ ಮೂರು ದಶಕಗಳಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಈ ರೀತಿಯ ವಸ್ತು ಪ್ರದರ್ಶನವನ್ನು ಏರ್ಪಡಿಸುತ್ರಿರುವ ನಗರದ ಇಂಜಿನಿಯರ್ ಗಳು ಮನೆಕಟ್ಟಿಸಿವ ಜನರಿಗೆ ಇನ್ನೂ ಹೆಚ್ಚಿನ ಮಾಹಿತಿ ನೀಡುವಂತಹ ಕೆಲಸಗಳನ್ನು ಮಾಡಲಿ ಎಂದು ಸಲಹೆ ನೀಡಿದರು. ಆರಂಭದಲ್ಲಿ ಸಿವಿಲ್ ಇಂಜಿನಿಯರ್ ಗಳ ಒಕ್ಕೂಟದ ಜಿ,ಬಿ, ಸುರೇಶ್ ಕುಮಾರ್ ಸ್ವಾಗತ ಮಾಡಿದರೆ ಇಂಜಿನಿಯರ್ ಎ.ಬಿ. ರವಿ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.