ದಾವಂತದ ಬದುಕಿಗೆ ವಚನಗಳೇ ಔಷಧ :ಡಾ.ಶಿವಗಂಗಾ ರುಮ್ಮಾ

ಕಲಬುರಗಿ:ಮೇ.2: ಇಂದಿನ ದಾವಂತದ ಬದುಕಿಗೆ ವಚನಗಳು ದಿವ್ಯ ಔಷಧವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಶಿವಗಂಗಾ ರುಮ್ಮಾ ಅವರು ಹೇಳಿದರು.

ನಗರದ ಚೇಂಬರ ಕಾಮರ್ಸ್ ನಲ್ಲಿ ಹಮ್ಮಿಕೊಂಡಿದ್ದ ಬಸವ ಪ್ರಕಾಶನದ ಸಂಸ್ಥಾಪಕರಾದ ಶ್ರೀಮತಿ ಬಸಮ್ಮ ಬಿ.ಕೊನೇಕ್ ಅವರ ಪುಣ್ಯಸ್ಮರಣೋತ್ಸವ ಹಾಗೂ “ಬಸವ ಸಿರಿ” ಪ್ರಶಸ್ತಿ ಪ್ರಧಾನ ಸಮಾರಂಭ ಉದ್ದೇಶಿಸಿ ಮಾತನಾಡುತ್ತಾ ಜೀವನದಲ್ಲಿ ಹಲವು ಸಂಕಟಗಳು ಬಂದಾಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವೇಳೆ ವಚನ ಒಂದನ್ನು ಸ್ಮರಿಸಿದಾಗ ಅವು ನಮಗೆ ಧೈರ್ಯ ತಂದು ಕೊಡುತ್ತವೆ ಅಲ್ಲದೇ ನಮ್ಮ ಕತ್ತಲೆಯ ಬದುಕನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತವೆ ಎಂದರು.

ಹಲವಾರು ದಾರ್ಶನಿಕರು ಕೇವಲ ಮನುಷ್ಯನಿಗಷ್ಟೇ ಲೇಸನ್ನು ಬಯಸಿದ್ದರು, ಆದರೆ ಸಕಲ ಜೀವ ರಾಶಿಗಳಲ್ಲೂ ಲೇಸು ಬಯಸಿ ಸಾರಿದವರು ಶಿವ ಶರಣರು ಮಾತ್ರ. ಅಂತಹವರ ಸಾಲಿಗೆ ಶ್ರೀಮತಿ ಬಸಮ್ಮ ಕೊನೆಕ್ರವರು ಸೇರುತ್ತಾರೆ ಎಂದರು.

“ಬಸವಸಿರಿ”ಪ್ರಶಸ್ತಿ ಸ್ವೀಕರಿಸಿದ ಅಕ್ಕ ಗಂಗಾoಬಿಕೆ ಅವರು ಮಾತನಾಡುತ್ತ ಸಕರಾತ್ಮಕ ಬದುಕು ಹಾಗೂ ಧನಾತ್ಮಕ ಚಿಂತನೆಯಿಂದ ಉತ್ತಮ ಮನುಷ್ಯನಾಗಲು ಸಾಧ್ಯವಿದೆ.ಭಾರತ ಒಂದು ಕಾಲದಲ್ಲಿ ವಿಶ್ವಕ್ಕೆ ಗುರುವಾದ ದೇಶ ಇಲ್ಲಿ ಅನೇಕ ಮಹಾತ್ಮರು, ಶಿವಶರಣರು ಬಾಳಿ ಬದುಕಿದ ದೇಶವಾಗಿದೆ.ಇಂತಹ ನೆಲದಲ್ಲಿ ಹುಟ್ಟಿರುವ ನಾವೆಲ್ಲರೂ ನಿಜಕ್ಕೂ ಸುದೈವಿಗಳು ಆದರೆ ಇಂದು ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿ ಧರ್ಮ,ಆಚಾರ,ವಿಚಾರ, ಸಂಸ್ಕೃತಿ, ಪರಂಪರೆ,ಎಲ್ಲವನ್ನೂ ಮರೆತು ಅರ್ಥಹೀನ, ಉದ್ದೇಶವಲ್ಲದ ಖಾಲಿ ಕೊಡದಂತಹ ಜೀವನ ಸಾಗಿಸುತ್ತಿದ್ದು, ಹಣ ಹಾಗೂ ಅಧಿಕಾರದ ಬೆನ್ನು ಹಿಂದೆ ಬಿದ್ದು ತಾನು ಎಲ್ಲಿರುವೆ ಎಂಬುದನ್ನು ಸಹ ಮರೆತುಬಿಟ್ಟಿದ್ದೇವೆ. ಇದು ನಮ್ಮ ಅವನತಿಗೆ ಕಾರಣವಾಗುತ್ತಿದೆ. ಎಂಬುದನ್ನು ನಾವು ಸಹ ಅರಿತಿಲ್ಲ ಬರೀ ಭ್ರಮನಿರಸನದಲ್ಲಿ ಕಾಲ ಕಳೆಯುತ್ತಿದ್ದು, ಇದು ಬದಲಾವಣೆ ಆಗಬೇಕಾದರೆ ಬಸವಾದಿ ಶಿವಶರಣರ ವಚನ ಸಾಹಿತ್ಯ, ಓದಿ ಅರ್ಥೈಸಿಕೊಂಡು ಮೈಗೂಡಿಸಿಕೊಂಡರೆ ಖಂಡಿತವಾಗಿಯೂ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಇಂದ ಬದುಕಲು ಸಾಧ್ಯವಿದೆ. ಅದಕ್ಕೆ ಇವತ್ತಿನ ಶ್ರೀಮತಿ ಬಸಮ್ಮ ಕೊನೇಕ್ ರವರ ಸ್ಮರಣಾರ್ಥವಾಗಿ ನೀಡುವ “ಬಸವ ಸಿರಿ”ಕಾರ್ಯಕ್ರಮವೇ ಸಾಕ್ಷಿ ಎಂದರು. ಪ್ರಕಾಶನದ ಮುಖ್ಯಸ್ಥರಾ ದ ಶ್ರೀ ಬಸವರಾಜ್ ಜಿ ಕೊನೇಕ್ ಅಧ್ಯಕ್ಷತೆ ವಹಿಸಿದ್ದರು.ಸಿದ್ದಲಿಂಗ ಕೊನೆಕ್, ಡಾ, ಶಿವರಾಜ ಪಾಟೀಲ್ ಡಾ. ಗವಿಸಿದ್ದಪ್ಪ ಪಾಟೀಲ, ಡಾ.ಚಿ.ಸಿ.ನಿಂಗಣ್ಣ ಡಾ. ಸ್ವಾಮಿ ರಾವ್ ಕುಲಕರ್ಣಿ, ಡಾ. ಶರಣ ಬಸಪ್ಪ ವಡ್ಡನಕೇರಿ, ಕಾವ್ಯಶ್ರೀ,ಈರಣ್ಣಕೊನೇಕ್, ರವಿ ಕೊನೇಕ್, ಎಸ್. ಎಲ್. ಮಾ ಲಿಪಾಟೀಲ್, ಪ್ರೀತಿ ಕೊನೇಕ್, ಲಕ್ಷ್ಮಿ ಪಾಟೀಲ, ಸರೋಜಾ ಬಿರಾದಾರ,ಹಾಗೂ ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಲಹಾ ಸಮಿತಿ ಸದಸ್ಯರಾದ ಡಾ.ಗವಿಸಿದ್ದಪ್ಪ ಪಾಟೀಲ್ ಅವರು ಸ್ವಾಗತಿಸಿದರು. ಡಾ. ಶಿವರಾಜ ಪಾಟೀಲ ಅವರು ನಿರೂಪಿಸಿ ಪ್ರಾಸ್ತಾವಿಕ ಮಾತನಾಡಿದರು.