ದಾಳಿ ಹೊಣೆ ಹೊತ್ತುಕೊಂಡ ಟಿಆರ್‌ಎಫ್ ತನಿಖೆ ಎನ್‌ಐಎ ಹೆಗಲಿಗೆ

ನವದೆಹಲಿ,ಜೂ.೧೦-ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಿನ್ನೆ ಪ್ರವಾಸಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ಭಯೋತ್ಪಾದಕ ಭೀಕರ ದಾಳಿಯ ಹೊಣೆಯನ್ನು ಪಾಕಿಸ್ತಾನ ಬೆಂಬಲಿತ ‘ದಿ ರೆಸಿಸ್ಟೆನ್ಸ್ ಫ್ರಂಟ್’ (ಟಿಆರ್‌ಎಫ್) ವಹಿಸಿಕೊಂಡಿದೆ.
ಪ್ರವಾಸಿಗರು ಮತ್ತು ಸ್ಥಳೀಯರಲ್ಲದವರ ಮೇಲೆ ಇಂತಹ ದಾಳಿಗಳನ್ನು ಮುಂದವರಿಸಲಿದ್ದು, ರಿಯಾಸಿ ದಾಳಿಯನ್ನು ಹೊಸ ಆರಂಭಕ್ಕೆ ಮುನ್ನುಡಿ’ ಎಂದು ಉಗ್ರರು ಆತಂಕಕಾರಿ ಹೇಳಿಕೆ ನೀಡಿರುವ ಬೆನ್ನಲ್ಲೇ ದಾಳಿಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಲಾಗಿದೆ.
ಈ ನಡುವೆ ದಾಳಿ ನಡೆಸಿದ ಪ್ರದೇಶದಲ್ಲಿ ಭದ್ರತೆಯನ್ನು ಬಲಪಡಿಸಿ ಭಯೋತ್ಪಾದಕರನ್ನು ಪತ್ತೆಹಚ್ಚಲು ಉಗ್ರ ನಿಗ್ರ ದಳದ ಅಧಿಕಾರಿಗಳು ಬೃಹತ್ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಭಾರತೀಯ ಸೇನೆ, ಪೊಲೀಸ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ ಪಿಎಫ್ ) ಸೇರಿದಂತೆ ಭದ್ರತಾ ಪಡೆಗಳು ರಾಜೌರಿ ಜಿಲ್ಲೆಯ ಗಡಿಯಲ್ಲಿರುವ ತೆರಿಯಾತ್-ಪೋನಿ-ಶಿವ್ ಖೋರಿ ಪ್ರದೇಶದಲ್ಲೆಲ್ಲಾ ಸುತ್ತುವರೆದು ಶೋಧಕಾರ್ಯ ನಡೆಸುತ್ತಿವೆ.
ಡ್ರೋನ್‌ಗಳು ಮತ್ತು ಸ್ನಿಫರ್ ಡಾಗ್‌ಗಳು ಸೇರಿದಂತೆ ಕಣ್ಗಾವಲು ಉಪಕರಣಗಳು ಇನ್ನಿತರ ಉಪಕರಣಗಳ ಮೂಲಕ ಶಸ್ತ್ರಸಜ್ಜಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಶಿವ ಖೋರಿ ದೇವಾಲಯದಿಂದ ಮಾತಾ ವೈಷ್ಣೋ ದೇವಿ ದೇವಾಲಯದ ಮೂಲ ಶಿಬಿರವಾದ ಕತ್ರಾಗೆ ಹಿಂದಿರುಗುತ್ತಿದ್ದಾಗ ಹತ್ತಿರದ ಕಾಡಿನಲ್ಲಿ ಅಡಗಿದ್ದ ಭಯೋತ್ಪಾದಕರು ವಾಹನದ ಮೇಲೆ ಹೊಂಚು ಹಾಕಿ ಗುಂಡು ಹಾರಿಸಿದರು. ಬಸ್ ಚಾಲಕನಿಗೆ ಗುಂಡು ತಗುಲಿ ಸಮತೋಲನ ಕಳೆದುಕೊಂಡಿದ್ದು, ವಾಹನವು ಕಮರಿಗೆ ಉರುಳಿ ಬಿದ್ದಿದೆ.
ಯಾರಿವರು ಉಗ್ರರು:
ಭಾರತವು ೨೦೨೩ ರಲ್ಲಿ ರೆಸಿಸ್ಟೆನ್ಸ್ ಫ್ರಂಟ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ೩೭೦ ನೇ ವಿಧಿಯನ್ನು ರದ್ದುಪಡಿಸಿದ ನಂತರ ಇದನ್ನು ೨೦೧೯ ರಲ್ಲಿ ಉಗ್ರರು ಸ್ಥಾಪಿಸಿದ್ದರು. ಇದು ಡಜನ್‌ಗಟ್ಟೆ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದೆ.
ರಿಯಾಸಿ ಬಸ್ ದಾಳಿಯಲ್ಲಿ ಎರಡರಿಂದ ಮೂರು ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ರಾಜೌರಿ ಮತ್ತು ಪೂಂಛ್ ನಲ್ಲಿ ಇದೇ ಮಾದರಿಯಲ್ಲಿ ದಾಳಿ ನಡೆಸಿದ್ದರು. ಭಯೋತ್ಪಾದಕರು ಕಾಡಿನಲ್ಲಿ ಅಡಗಿ ಕುಳಿತು ದಾಳಿ ಮಾಡಿದ್ದಾರೆ. ಘಟನೆ ಬಳಿಕ ಭಯೋತ್ಪಾದಕರು ರಿಯಾಸಿಯಿಂದ ಪಲಾಯನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಭಯೋತ್ಪಾದಕರೆಲ್ಲರೂ ಪಾಕಿಸ್ತಾನಿಗಳು ಮತ್ತು ಪಿರ್ ಪಂಜಾಲ್ ಪ್ರದೇಶದ ದಕ್ಷಿಣದಲ್ಲಿ ಎರಡು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಶೋಧ ಕಾರ್ಯಾಚರಣೆಗಾಗಿ ಉಗ್ರ ನಿಗ್ರಹ ದಳ ಡ್ರೋನ್‌ಗಳನ್ನು ಬಳಸುತ್ತಿವೆ. ಇದಲ್ಲದೆ, ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಂಡವು ಕಾರ್ಯಾಚರಣೆ ನಡೆಸುತ್ತಿದೆ.
೩೪ ಮಂದಿಗೆ ಗಾಯ:
ಉಗ್ರದ ದಾಳಿಗೆ ಬಲಿಯಾದವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶ ಮತ್ತು ರಾಜಸ್ಥಾನದವರು. ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಬಸ್ ನ ಚಾಲಕ ಮತ್ತು ನಿರ್ವಾಹಕರನ್ನು ಸಹ ಗುರುತಿಸಲಾಗಿದ್ದು, ಇಬ್ಬರೂ ರಿಯಾಸಿ ಮೂಲದವರು. ಗಾಯಗೊಂಡವರಲ್ಲಿ ೩೪ ಮಂದಿ ಉತ್ತರ ಪ್ರದೇಶದವರು, ಐವರು ದಿಲ್ಲಿಯವರು ಮತ್ತು ಇಬ್ಬರು ರಾಜಸ್ಥಾನದವರು.
ದಾಳಿಯ ಬಳಿಕ ವಾಹನ ಕಮರಿಗೆ ಬಿದ್ದಿದ್ದರೂ ಭಯೋತ್ಪಾದಕರು ಬಸ್ ಮೇಲೆ ಗುಂಡು ಹಾರಿಸುವುದನ್ನು ಮುಂದುವರಿಸಿದ್ದಾರೆ ಎಂದು ದಾಳಿಯಲ್ಲಿ ಬದುಕುಳಿದವರು ತಿಳಿಸಿದ್ದಾರೆ.
ಭಯೋತ್ಪಾದಕರು ಕಮರಿಗೆ ಇಳಿದು ಹಲವಾರು ನಿಮಿಷಗಳ ಕಾಲ ಗುಂಡು ಹಾರಿಸುವುದನ್ನು ಮುಂದುವರಿಸಿದ್ದರು.ಗ್ರಾಮಸ್ಥರ ಸಹಾಯದಿಂದ ಪೊಲೀಸರು ರಾತ್ರಿ ವೇಳೆಗೆ ಪ್ರಯಾಣಿಕರನ್ನು ಸ್ಥಳಾಂತರಿಸಿದ್ದರು.
೧೦ ಲಕ್ಷ ಪರಿಹಾರ:
ರಿಯಾಸಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸ್ಥಳಾಂತರದ ಮೇಲ್ವಿಚಾರಣೆ ನಡೆಸಿದ್ದು. ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಯೋತ್ಪಾದಕ ದಾಳಿಯಲ್ಲಿ ಬಲಿಯಾದವರ ಕುಟುಂಬಗಳಿಗೆ ೧೦ ಲಕ್ಷ ರೂ.ಗಳ ಆರ್ಥಿಕ ಸಹಾಯ ಘೋಷಿಸಿದ್ದಾರೆ.
ಜೂನ್ ೨೯ರಿಂದ ಅಮರನಾಥ ಯಾತ್ರೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ದಾಳಿಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯವಾದ ಸೂಚನೆಗಳನ್ನು ನೀಡಿದ್ದಾರೆ.