ದಾಳಿ ಮಾಡಿಸುವ ಅಗತ್ಯವಿಲ್ಲ- ಸಿ.ಎಂ

ಹುಬ್ಬಳ್ಳಿ,ಮಾ.೧೫: ಭಾರತೀಯ ಜನತಾಪಕ್ಷಕ್ಕೆ ಯಾರಮೇಲೂ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಡಕ್ಕಾಗಿ ಹೇಳಿದರು.
ನಗರದ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ ಕುರಿತಾದ ಪ್ರಶ್ನೆಗೆ ಮೇಲಿನಂತೆ ನುಡಿದರು.
ಇದು ಬಿಜೆಪಿ ಪ್ರೇಷಿತ ದಾಳಿ ಎಂಬುದು ಸುಳ್ಳು, ದಾಳಿಯ ಹಿಂದೆ ಬಿಜೆಪಿಯ ಪಾತ್ರವಿಲ್ಲ ಎಂದು ಅವರ ಸ್ಪಷ್ಟವಾಗಿ ಹೇಳಿದರು.
ತನಿಖಾ ಸಂಸ್ಥೆಗಳಿಗೆ ಬಿಜೆಪಿ ಮುಕ್ತ ವಾತಾವರಣ ನೀಡಿದೆ, ಅವು ತಮ್ಮ ಕಾರ್ಯ ನಿರ್ವಹಿಸುತ್ತವೆ ಎಂದ ಅವರು ತಪ್ಪು ಮಾಡದೇ ಇರುವವರು ಏನೇ ಇದ್ದರೂ ಅದರ ವಿವರಣೆ ಕೊಡಲಿ ಎಂದು ಚುಟುಕಾಗಿ ನುಡಿದರು.
ಸಿ.ಟಿ.ರವಿ ಹಾಗೂ ವಿಜಯೇಂದ್ರರ ಮಾತಿನ ಚಕಮಕಿ ಕುರಿತಾದ ಮಾಧ್ಯಮದವರ ಪ್ರಶ್ನೆಯೊಂದರಿಂದ ಸಿಡಿಮಿಡಿಗೊಂಡ ಮುಖ್ಯಮಂತ್ರಿ, ಎಲ್ಲವೂ ಮಾಧ್ಯಮಗಳ ಸೃಷ್ಟಿ ಎಂದು ಥಟ್ಟನೇ ಅಲ್ಲಿಂದ ತೆರಳಿದರು.
೮ ಕೋಟಿ ಜಪ್ತಿ
ಈ ಮಧ್ಯೆ ರಾಣೆಬೆನ್ನೂರಿನ ಬೀರೇಶ್ವರ ನಗರದಲ್ಲಿರುವ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು ೮ ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಶಂಕರ್ ಅವರ ಗೃಹ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲು ಸಂಗ್ರಹಿಸಿಟ್ಟಿದ್ದ ಶಂಕರ್ ಭಾವಚಿತ್ರ ಇರುವ ಸೀರೆ ಬಾಕ್ಸ್, ತಟ್ಟೆ, ಲೋಟ ಹಾಗೂ ಎಲ್‌ಕೆಜಿಯಿಂದ ಪದವಿ ಕಾಲೇಜುಗಳವರೆಗೆ ಹಂಚಲು ತಂದಿರುವ ಸ್ಕೂಲ್ ಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
೬೦೦೦ಕ್ಕೂ ಹೆಚ್ಚು ಸೀರೆ, ೯೦೦೦ ಕ್ಕೂ ಹೆಚ್ಚು ಶಾಲಾ ಕಾಲೇಜು ಬ್ಯಾಗ್‌ಗಳು ಸಾವಿರಾರು ತಟ್ಟೆ, ಲೋಟಗಳು ಸುಮಾರು ೩೦-೪೦ ಲಕ್ಷ ಬೆಲೆಬಾಳುವ ಗೃಹಪಯೋಗಿ ವಸ್ತುಗಳು ವಶಕ್ಕೆ ಪಡೆಯಲಾಗಿದ್ದು ಅವುಗಳ ಮೌಲ್ಯದ ೮ಕೋಟಿಗೂ ಹೆಚ್ಚು ಎನ್ನಲಾಗಿದೆ.
ಸುಮಾರು ಏಳು ಗಂಟೆಗೂ ಹೆಚ್ಚು ಕಾಲ ದಾಳಿ ನಡೆಸಿ ಅಧಿಕಾರಿಗಳು ತಪಾಸಣೆ ನಡೆಸಿ ಜಪ್ತಿ ಮಾಡಿರುವ ವಸ್ತುಗಳನ್ನು ಅಧಿಕಾರಿಗಳು ಪೊಲೀಸರ ವಶಕ್ಕೆ ನೀಡಿದ್ದಾರೆ.
ದಾಳಿಯಲ್ಲಿ ಸುಮಾರು ೮ ಕೊಟಿ ರೂಪಾಯಿ ವೆಚ್ಚದ ವಸ್ತುಗಳು ಪತ್ತೆಯಾಗಿವೆ ಎಂದು ಅಂದಾಜಿಸಲಾಗಿದ್ದು, ಈ ಎಲ್ಲ ವಸ್ತುಗಳ ಜಿಎಸ್‌ಟಿ ಬಿಲ್ ಕೇಳಿದ್ದು, ಬಿಲ್ ಕೊಡಲು ಆರ್. ಶಂಕರ್ ಕಾಲಾವಕಾಶ ಕೇಳಿದ್ದಾರೆ. ಒಂದು ವೇಳೆ ಸರಿಯಾದ ಜಿಎಸ್‌ಟಿ ಬಿಲ್ ಇಲ್ಲದಿದ್ದರೆ ದಂಡ ವಿಧಿಸುವ ಸಾಧ್ಯತೆ ಇದೆ.
ಇನ್ನು ಚುನಾವಣೆ ನಿಯಮ ಉಲ್ಲಂಘಣೆ ಮಾಡಿದ್ದಾರಾ ಎಂಬುವುದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಸಹ ದಾಳಿ ಮಾಡಿದ್ದು, ಎಲ್ಲ ದಾಖಲೆಗಳನ್ನು ಕೊರ್ಟ್ ಮುಂದೆ ಹಾಜರುಪಡಿಸಿ, ಒಪ್ಪಿಗೆ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗುವುದು ಎಂದು ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಮಾಹಿತಿ ನೀಡಿದ್ದಾರೆ.
ಹಾವೇರಿ ಉಪವಿಭಾಗಾಧಿಕಾರಿ ಅವರಿಗೆ ದಾಖಲೆ ಪತ್ರ, ಬಿಲ್ ಮತ್ತು ಸ್ಟಾಕ್ ಚೆಕ್ ತಪಾಸಣೆ ನಡೆಸಲು ವಾಣಿಜ್ಯ ತೆರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲು ತಿಳಿಸಿದ್ದಾರೆ.
ಇನ್ನು ಆರ್.ಶಂಕರ್ ನಿವಾಸದ ಮೇಲೆ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಆಗಮಿಸಿದ ಮಾಜಿ ಸಚಿವರ ಅಭಿಮಾನಿಗಳು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.