ದಾಳಿ ಬೇಡ ಇರಾನ್‌ಗೆ ಬೈಡೆನ್ ಎಚ್ಚರಿಕೆ

ವಾಷಿಂಗ್ಟನ್, ಏ.೧೩- ಅಮೆರಿಕಾ ರಕ್ಷಣೆಗೆ ನಿಂತಿರುವ ಯಾವುದೇ ದೇಶದ ಮೇಲೆ ದಾಳಿ ಮಾಡದಂತೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಟೆಹ್ರಾನ್‌ಗೆ ಎಚ್ಚರಿಕೆ ನೀಡಿದ್ಧಾರೆ.
ಇಸ್ರೇಲ್ ಅನ್ನು ರಕ್ಷಿಸಲು ಅಮೆರಿಕಾ ಸಹಾಯ ಮಾಡಲಿದೆ. ಇಸ್ರೇಲ್ ಮೇಲೆ ದಾಳಿ ಮಾಡಲು ಅವಕಾಶ ಮಾಡಿಕೊಡುವುದಿಲ್ಲ, ಇದರಲ್ಲಿ ಇರಾನ್ ಯಶಸ್ವಿಯಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ರಹಸ್ಯ ಮಾಹಿತಿ ಬಹಿರಂಗಪಡಿಸಲು ಬಯಸುವುದಿಲ್ಲ, ಅಮೆರಿಕಾ ಬೆಂಬಲಿಸುವ ಯಾವುದೇ ದೇಶದ ಮೇಲೆ ದಾಳಿ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದಿದ್ದಾರೆ
ಕಳೆದ ವಾರ ಡಮಾಸ್ಕಸ್‌ನಲ್ಲಿರುವ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಸೇಡು ತೀರಿಸಿಕೊಳ್ಳಲು ಇರಾನ್ ಪ್ರತಿಜ್ಞೆ ಮಾಡಿದೆ, ಇಬ್ಬರು ಜನರಲ್‌ಗಳು ಸೇರಿದಂತೆ ಏಳು ಮಂದಿ ಸೇನಾಧಿಕಾರಿಗಳನ್ನು ಹತ್ಯೆ ಮಾಡಿದ್ದು ಪ್ರತೀಕಾರ ತೀರಿಸಿಕೊಳ್ಳಲು ಮುಂದಾದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಪ್ರತಿಕ್ರಿಯಿಸಿ, ಇಸ್ರೇಲ್ ಮೇಲಿನ ಇರಾನ್ ದಾಳಿ ಆತಂಕ ಹೆಚ್ಚು ಮಾಡಿದೆ. “ನೈಜ ಮತ್ತು ಕಾರ್ಯಸಾಧ್ಯವಾದ ಬೆದರಿಕೆ” ಎಂದು ಕರೆದ್ದಾರೆ.
ಈ ನಡುವೆ “ಪ್ರಸ್ತುತ ಇರಾನ್ ಅಥವಾ ಇಸ್ರೇಲ್‌ನಲ್ಲಿ ನೆಲೆಸಿರುವ ಎಲ್ಲರೂ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಲು ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಇರಾನ್‌ಗೆ ಭೇಟಿ ನೀಡದಂತೆ ಸಲಹೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯ “ಈ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು” ಇರಾನ್ ಮತ್ತು ಇಸ್ರೇಲ್‌ಗೆ ಭೇಟಿ ನೀಡದಂತೆ ಭಾರತೀಯರಿಗೆ ಸಲಹೆ ನೀಡಿದೆ.
ಇರಾನ್ ಮತ್ತು ಜರ್ಮನ್ ರಾಷ್ಟ್ರೀಯತೆಯನ್ನು ಹೊಂದಿರುವ ಉಭಯ ನಾಗರಿಕರು ವಿಶೇಷವಾಗಿ ಅಪಾಯದಲ್ಲಿದ್ದಾರೆ”.
ಮುಂದಿನ ಸೂಚನೆ ಬರುವವರೆಗೂ ಇರಾನ್ ಅಥವಾ ಇಸ್ರೇಲ್‌ಗೆ ಪ್ರಯಾಣಿಸದಂತೆ ಎಲ್ಲಾ ಭಾರತೀಯರಿಗೆ ಸೂಚಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಭಾರತವಲ್ಲದೆ, ಫ್ರಾನ್ಸ್, ಪೋಲೆಂಡ್ ಮತ್ತು ರಷ್ಯಾ ಕೂಡ ತಮ್ಮ ನಾಗರಿಕರಿಗೆ ಈ ಪ್ರದೇಶಕ್ಕೆ ಪ್ರಯಾಣಿಸದಂತೆ ಎಚ್ಚರಿಕೆ ನೀಡಿವೆ. ಪರಿಸ್ಥಿತಿಯನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಿ ಎಂದು ಜರ್ಮನಿಯ ವಿದೇಶಾಂಗ ಕಚೇರಿ ತಿಳಿಸಿದೆ