
ಎನ್‌ಐಎ ಭೇಟಿ
ಶ್ರೀನಗರ,ಏ.೨೧-ಭಿಂಬರ್ ಗಲಿ ಪ್ರದೇಶದ ಬಳಿ ನಡೆದ ಉಗ್ರರ ದಾಳಿ ವೇಳೆ ಯೋಧರ ವಾಹನದ ಮೇಲೆ ಗುಂಡು ಹಾರಿಸಿದ್ದು, ನಂತರ ಗ್ರೆನೇಡ್ ದಾಳಿಯ ಸಾಧ್ಯತೆಯಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಸೇನೆ ಶಂಕೆ ವ್ಯಕ್ತಪಡಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ ಐಎ) ತಂಡ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸಿದೆ.
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಭಿಂಬರ್ ಗಲಿ ಪ್ರದೇಶದ ಬಳಿ ಸೇನಾ ವಾಹನವನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಐವರು ಯೋಧರು ಹುತಾತ್ಮರಾಗಿದ್ದು, ಓರ್ವ ಯೋಧ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಎನ್‌ಐಎ ತಂಡ ಇಂದು ಮಧ್ಯಾಹ್ನ ಸುಮಾರಿಗೆ ದೆಹಲಿಯಿಂದ ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದೆ.ದಾಳಿಯಲ್ಲಿ ಮೃತಪಟ್ಟ ಯೋಧರನ್ನು ಹವಿಲ್ದಾರ್ ಮನ್ದೀಪ್ ಸಿಂಗ್, ದೇಬಾಶಿಶ್ ಬಸ್ವಾಲ್, ಕುಲ್ವಂತ್ ಸಿಂಗ್, ಹರಿಕಿಶನ್ ಸಿಂಗ್ ಮತ್ತು ಸೇವಕ್ ಸಿಂಗ್ ಎಂದು ಗುರುತಿಸಲಾಗಿದೆ.ಮೃತ ಯೋಧರೆಲ್ಲರೂ ಈ ಪ್ರದೇಶದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾಗಿದ್ದ ರಾಷ್ಟ್ರೀಯ ರೈಫಲ್ಸ್ ಘಟಕದ ಸಿಬ್ಬಂದಿಯಾಗಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಯೋಧನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೇನಾ ಪ್ರಧಾನ ಕಚೇರಿಯ ಉತ್ತರ ಕಮಾಂಡ್ ಅಧಿಕೃತವಾಗಿ ಮಾತನಾಡಿ, ಅನಾಮಿಕ ಉಗ್ರರು ಸೇನಾ ವಾಹನದ ಮೇಲೆ ಗುಂಡು ಹಾರಿಸಿದ್ದಾರೆ. ಭಾರೀ ಮಳೆ ಹಾಗೂ ಕಡಿಮೆ ಗೋಚರತೆಯ ಲಾಭವನ್ನು ಉಗ್ರರು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಘಟನೆಗೆ ಉಗ್ರರು ಗ್ರೆನೇಡ್‌ಗಳನ್ನು ಬಳಸಿದ್ದರಿಂದ ವಾಹನಕ್ಕೆ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿಸಿದರು.ಜೈಶ್ ಬೆಂಬಲಿತ ಉಗ್ರರ ಗುಂಪು, ಪೀಪಲ್ಸ್ ಆ?ಯಟಿ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‌ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯಲ್ಲಿ ನಾಲ್ವರು ಉಗ್ರರು ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಭೆಗಾಗಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಾಕಿಸ್ತಾನ ಘೋಷಿಸಿದ ದಿನವೇ ಉಗ್ರರ ದಾಳಿ ನಡೆದಿದೆ. ಪ್ರಮುಖವಾಗಿ, ಮೇ ತಿಂಗಳಲ್ಲಿ ಶ್ರೀನಗರದಲ್ಲಿ ಜಿ೨೦ ಪ್ರವಾಸೋದ್ಯಮ ವಕಿರ್ಂಗ್ ಗ್ರೂಪ್ ಸಭೆಯನ್ನು ಸಹ ನಿಗದಿಯಾಗಿದೆ. ಕಳೆದ ವಾರ ಕೇಂದ್ರಾಡಳಿತ ಪ್ರದೇಶದ ಭದ್ರತಾ ಪರಿಸ್ಥಿತಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪರಿಶೀಲಿಸಿದ್ದರು.
ಆರಂಭದಲ್ಲಿ ಸಿಡಿಲು ಬಡಿದು ಸೇನಾ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿತ್ತು. ಆದ್ರೆ ಸಂಶಯಾಸ್ಪದ ಸ್ಫೋಟದಿಂದ ಅನಾಹುತ ಸಂಭವಿಸಿದೆ ಅಂತ ಶಂಕಿಸಲಾಯಿತು. ಸ್ಥಳ ಪರಿಶೀಲನೆ ಬಳಿಕ ಉಗ್ರರ ಕೃತ್ಯ ಎಂದು ತಿಳಿದು ಬಂದಿದೆ.
ಕುಕೃತ್ಯದ ಹೊಣೆ ಹೊತ್ತ ಪೀಪಲ್ಸ್ ಆಫ್ ಆಂಟಿ ಪ್ಯಾಸಿಸ್ಟ್ ಫ್ರಂಟ್
ಇದೆ ಶಂಕೆ ಬಳಿಕ ಸತ್ಯವಾಗಿದೆ. ಪೀಪಲ್ಸ್ ಆಫ್ ಆಂಟಿ ಪ್ಯಾಸಿಸ್ಟ್ ಫ್ರಂಟ್ ಎಂಬ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತಿದೆ. ಪೀಪಲ್ಸ್ ಆಫ್ ಆಂಟಿ ಪ್ಯಾಸಿಸ್ಟ್ ಫ್ರಂಟ್, ಪಾಕ್ ಪೋಷಿತ ಲಷ್ಕರೆ ಎ ತಯ್ಬಾ ಸಂಘಟನೆ ಬೆಂಬಲಿತ ಸಂಘಟನೆ ಆಗಿದೆ. ಘಟನೆ ಬಗ್ಗೆ ಇದೊಂದು ದುರಾದೃಷ್ಟಕರ ಘಟನೆ. ಮೃತ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ಸೂಚಿಸಿದ್ದಾರೆ.