ದಾಳಿಂಬೆ ಬೆಳೆದು 20 ಲಕ್ಷ ಗಳಿಸಿದ ರೈತ 

ಹಿರಿಯೂರು.ಜೂ.13- ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಗೋಪಿಕುಂಟೆ ರೈತ ನರಸಿಂಹ ಮೂರ್ತಿಯವರು ಸುಮಾರು ಮೂರುವರೆ ಎಕರೆಯಲ್ಲಿ ದಾಳಿಂಬೆ ಗಿಡಗಳನ್ನು ಬೆಳೆಸಿದ್ದು ಈ ಬಾರಿ 20 ಲಕ್ಷ ಹಣ ಸಂಪಾದಿಸಿರುವುದಾಗಿ ತಿಳಿಸಿದ್ದಾರೆ. ಭಗ್ವ ತಳಿಯ ದಾಳಿಂಬೆ ಹಣ್ಣು ಉತ್ತಮ ಫಲ ನೀಡಿದ್ದು ಒಂದೊಂದು ಹಣ್ಣು 750 ರಿಂದ 800 ಗ್ರಾಂ ವರೆಗೆ ಬಂದಿದೆ.  ಈ ಹಿಂದೆ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ನರಸಿಂಹ ಮೂರ್ತಿಯವರು ತೋಟಗಾರಿಕೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೆಲಸವನ್ನು ಬಿಟ್ಟು ದಾಳಿಂಬೆ ಬೆಳೆ ಬೆಳೆಯಲು ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಆರಂಭದಲ್ಲಿ ಎರಡು ವರ್ಷ ಸಾವಯವ ಕೃಷಿ ನಡೆಸಿದ್ದು ನಂತರ ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಲಾಗಿದೆ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬೆಳೆದಿರುವ ದಾಳಿಂಬೆ ಗಿಂತಲೂ ಇದು ಅಧಿಕ ಇಳುವರಿ ಬಂದಿದೆ ಎನ್ನುತ್ತಾರೆ. ಈ ಬಾರಿ ಒಂದು ಕೆಜಿಗೆ ಸುಮಾರು 180 ರೂ ಬೆಲೆ ಬಂದಿದೆ ಜಗದೀಶ್ ಮತ್ತು ಮುಜ್ಜು  ಎಂಬುವರು  ದಾಳಿಂಬೆ ಖರೀದಿಸುತ್ತಿದ್ದಾರೆ.  ದಾಳಿಂಬೆ ಬೆಳೆ ಬೆಳೆಯಲು ತಮ್ಮ ತಂದೆಯವರಾದ ಜಯರಾಮಯ್ಯ, ಆತ್ಮೀಯರಾದ ಜಗದೀಶ್, ಚಂದ್ರಶೇಖರ್, ಕಂಬಣ್ಣ, ಗೌಡ್ರು  ಮಾರ್ಗ ದರ್ಶನ ನೀಡಿ ದಾಳಿಂಬೆ ಬೆಳೆ ಬೆಳೆಯುವುದಕ್ಕೆ ಸಹಕರಿಸಿರುವುದಾಗಿ ತಿಳಿಸಿದ್ದಾರೆ. ಕೆಲಸ ಇಲ್ಲದ ಸಾಕಷ್ಟು ಜನ ಇಂತಹ  ಸ್ವಯಂ ಉದ್ಯೋಗ ವನ್ನು ಕೈಗೊಂಡಲ್ಲಿ ಪ್ರಗತಿ ಸಾಧಿಸಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.