ದಾರ್ಶನಿಕರ ಆದರ್ಶ, ತತ್ವಗಳು ಎಲ್ಲರಿಗೂ ಮಾದರಿ

ಬಾದಾಮಿ, ಮಾ30: ಕನಕದಾಸರು, ಇಟಗಿ ಭೀಮಾಂಬಿಕೆ, ಗೊಗೇರಿಯ ಗೊಲ್ಲಾಳೆಶ್ವರ ಸೇರಿದಂತೆ ಎಲ್ಲ ದಾರ್ಶನಿಕರು ತಮ್ಮ ಜೀವನವನ್ನು ಮುಡುಪಾಗಿಟ್ಟು ಹೋರಾಡಿದ್ದು, ಅವರ ಆದರ್ಶ, ತತ್ವಗಳು ಎಲ್ಲರಿಗೂ ಮಾದರಿ, ದಾರಿದೀಪವಾಗಿವೆ ಎಂದು ಕಾಳಿದಾಸ ಪದವಿ ಕಾಲೇಜಿನ ಪ್ರಾಚಾರ್ಯ ಪೆÇ್ರ. ನಾಗರಾಜ ಹೊಟ್ಟಿ ಹೇಳಿದರು.
ಅವರು ನಗರದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ಕನಕ ಬಳಗ ಬಾದಾಮಿ ವತಿಯಿಂದ ಹಮ್ಮಿಕೊಂಡಿದ್ದ ಸತ್ಸಂಗ ಎರಡನೇ ಉಪನ್ಯಾಸ “ದಾರ್ಶನಿಕರ ಬದುಕು-ನಮ್ಮ ಬದುಕು” ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಕುಲ ಕುಲವೆಂದು ಹೊಡದಾಡದಿರಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ? ಎಂಬ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಕನಕದಾಸರು ಮೋಹನ ತರಂಗಿನಿ, ನಳ ಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ಕೀರ್ತನೆಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.
ಇಟಗಿ ಭೀಮವ್ವ ಆಧ್ಯಾತ್ಮ ಧರ್ಮಗಳನ್ನು ಗುರುವೆಂದು ನಂಬಿ ಬಡವರ, ಆಶ್ರಯ ಬಯಸಿ ಬರುವವರ ಸಂಕಷ್ಟಗಳಿಗೆ ಪರಿಹಾರ ಸೂಚಿಸುತ್ತಾ. ಯಾರೇ ಬಂದರೂ ಅವರ ಕಣ್ಣೀರು ಒರಿಸಿ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿ ಮೆರೆದ ಧೀಮಂತ ಸಾಧ್ವಿಮಣಿ. ಇಟಗಿ ಶ್ರೀ ಭೀಮಾಂಬಿಕಾ ತಾಯಿ ಹಾಲುಮತ ಕೃಷಿಕ ಕುಟುಂಬದಲ್ಲಿ ಜನಿಸಿದವರು. ಸಂಸಾರಿಕಾಶ್ರಮ ಸ್ವೀಕರಿಸಿ, ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಅನೇಕ ಜನರಿಗೆ ಆಶ್ರಯವಾದರು. ನಿರಂತರ ಅನ್ನದಾಸೋಹವನ್ನಿಟ್ಟು ಮಹಾ ದಾಸೋಹಿಯನಿಸಿದರು. ಈ ಮಹಾದೇವತೆಯ ಜೀವನ ಚರಿತ್ರೆ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮಂಜುನಾಥ ಹೊಸಮನಿ, ರಾಜ್ಯ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿ ಹನಮಂತ ಅಪ್ಪನ್ನವರ, ಖ್ಯಾತ ವೈದ್ಯ ಡಾ.ಕರವೀರಪ್ರಭು ಕ್ಯಾಲಕೊಂಡ, ಬಿ.ಎಂ.ಕಂಬಳಿ, ಡಿ.ಎಫ್.ಜುಟ್ಲರ, ಶಿವಾನಂದ ಮರಿಯನ್ನವರ, ಉಜ್ವಲ ಬಸರಿ, ಕೆ.ಬಿ.ಕೋರನ್ನವರ, ಯಲ್ಲಪ್ಪ ಹಾವರಗಿ, ಎಸ್.ಆರ್.ಕಟಗಿ, ಡಿ.ಬಿ.ಧರೆಗೆನ್ನವರ ಸೇರಿದಂತೆ ಮುಂತಾದವರು ಹಾಜರಿದ್ದರು.