ದಾರಿ ಸಮಸ್ಯೆ ಇತ್ಯರ್ಥಕ್ಕೆ ಶೀಘ್ರದಲ್ಲಿ ಅಧಿಸೂಚನೆ ಪ್ರಕಟಿಸಿ ಸುಗ್ರೀವಾಜ್ಞೆ ಹೊರಡಿಸಲು ಆಗ್ರಹ

ವಿಜಯಪುರ:ನ.6: ಜಮೀನುಗಳಿಗೆ ಹೋಗುವ ವಹಿವಾಟು ದಾರಿ ಸಮಸ್ಯೆ ಇತ್ಯರ್ಥಕ್ಕೆ ತಹಶೀಲ್ದಾರರಿಗೆ ಅಧಿಕಾರ ನೀಡಿ ಆದೇಶ ನೀಡಿರುವುದು ಸ್ವಾಗತಾರ್ಹ, ಆದರೆ ಶೀಘ್ರದಲ್ಲಿ ಅಧಿಸೂಚನೆ ಪ್ರಕಟಿಸಿ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷರಾದ ಸಂಗಮೇಶ ಸಗರ ಅಪರ್ ಜಿಲ್ಲಾಧಿಕಾರಿಗಳಾದ ರಮೆಶ ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಅವರು ಜಮೀನಗಳಿಗೆ ಹೋಗಲು ದಾರಿ ಇಲ್ಲದ ರೈತರಿಗೆ ದಾರಿ ಮಾಡಿ ಕೊಡಲು ತಹಶೀಲ್ದಾರರಿಗೆ ಸಂಪೂರ್ಣ ಅಧಿಕಾರ ನೀಡಬೇಕು, ಕೇವಲ ಅನುಭೋಗದ ಹಕ್ಕಿನಡಿ ಹಕ್ಕುಳ್ಳವರಿಗೆ ಮಾತ್ರ ಅನ್ವಯಿಸದೇ ಈಜ್‍ಮೆಂಟ್ರೀ ರೈಟ್ಸ್ ಹೊರತುಪಡಿಸಿ ಇರದವರಿಗೂ ಕೂಡಾ ದಾರಿ ಮಾಡಿ ಕೊಡಬೇಕು, ಆದೇಶ ಮಾಡಿ 20 ದಿನ ಗತಿಸಿದರು ಇಲ್ಲಿಯವರೆಗೂ ಅಧಿಸೂಚನೆ ಹೊರಡಿಸಿರುವುದಿಲ್ಲ. ರಾಜ್ಯ ಸರ್ಕಾರ ವಿಳಂಭ ಮಾಡದೇ ತಕ್ಷಣ ಅಧಿಸೂಚನೆ ಪ್ರಕಟಿಸಿ ಸುಗ್ರೀವಾಜ್ಞೇ ಹೊರಡಿಸಬೇಕು. ಏಕೆಂದರೆ ಹಳ್ಳಿಗಳಲ್ಲಿ ದಿನನಿತ್ಯ ಹೊಡೆದಾಟಗಳು ನಡೆಯುತ್ತಿವೆ ದಾರಿಗಾಗಿ ಕೆಲವೊಂದು ಭಾಗಗಳಲ್ಲಿ ಕೊಲೆಗಳಾಗಿವೆ, ದಾರಿ ಇಲ್ಲದ ಕಾರಣ ಜಮೀನು ಬಿತ್ತನೆ ಮಾಡದೇ ಪಾಳು ಬಿದ್ದು ರೈತ ಕುಟುಂಬಗಳು ಸಂಕಷ್ಟದಲ್ಲಿವೆ.

ಆದ್ದರಿಂದ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಬೇಕು. ರೈತರು ದಾರಿಗಾರಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ದಾರಿ ಮಾಡಿಕೊಡಬೇಕು, ಪ್ರತಿಯೊಂದು ಜಮೀನುಗಳ ದಾರಿಯನ್ನು ನಕ್ಷೆಯಲ್ಲಿ ಗುರುತಿಸಬೇಕು. ರಾಜ್ಯದ ಎಲ್ಲ ಜಮೀನುಗಳನ್ನು ಮೋಜಣಿ ಮಾಡಿ ಹದ್ದಿ ಗುರುತಿಸಬೇಕು, ತಹಶೀಲ್ದಾರರು ದಾರಿ ಮಾಡಿಕೊಡಲು ಬಂದಾಗ ಅಡ್ಡಿ ಪಡಿಸುವ ರೈತನಿಗೆ ಪ್ರಕರಣ ದಾಖಲಿಸಿ ದಂಡ ಹಾಕುವ ಅಧಿಕಾರ ಕೊಡಬೇಕು. ತಕ್ಷಣ ಅಧಿಸೂಚನೆ ಹೊರಡಿಸಿ ಸುಗ್ರೀವಾಜ್ಞೆ ಹೊರಡಿಸದಿದ್ದರೆ ಮತ್ತೆ ಉಪವಾಸ ಸತ್ಯಾಗ್ರಹ, ಹೋರಾಟ ಅನಿವಾರ್ಯವಾಗುತ್ತದೆಂದು ಅವರು ಎಚ್ಚರಿಕೆ ನೀಡಿದರು.

ಈ ವೇಳೆ ರೈತ ಮುಖಂಡರಾದ ಈರಣ್ಣ ದೇವರಗುಡಿ, ಹೊನಕೇರಪ್ಪ ತೆಲಗಿ, ಸೋಮನಗೌಡ ಪಾಟೀಲ, ವಿಠ್ಠಲ ಬಿರಾದಾರ, ಬಸವರಾಜ ಜಂಗಮಶೆಟ್ಟಿ, ಗುರು ಕೋಟ್ಯಾಳ, ಅಭಿಶೇಕ್ ದೊಡ್ಡಮನಿ, ನಜೀರ ನಂದರಗಿ, ಕಲ್ಲಪ್ಪ ಪಾರಶೆಟ್ಟಿ, ಶಾನೂರ ನಂದರಗಿ, ಹನುಮಂತಪ್ಪ ಬ್ಯಾಡಗಿ, ರಾಮನಗೌಡ ಬ್ಯಾಲ್ಯಾಳ, ಶ್ರೀಶೈಲ ಮುಳಜೀ, ರಘು ಬಳ್ಳಾರಿ, ಶ್ರೀಶೈಲ ಬಾಲಪ್ಪಗೋಳ, ಸಿಕಂದರ ಖರ್ಜಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.