ದಾಬಕಾ ಆಸ್ಪತ್ರೆಗೆ ಶಾಸಕ ಪ್ರಭು ಚವ್ಹಾಣ ಭೇಟಿ: ವೈದ್ಯಾಧಿಕಾರಿ ವಿರುದ್ಧ ಗರಂ

ಬೀದರ:ಜೂ.8:ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಜೂನ್ 7ರಂದು ಔರಾದ(ಬಿ) ಕ್ಷೇತ್ರದ ದಾಬಕಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.

ಆಸ್ಪತ್ರೆಯ ಎಲ್ಲ ವಾರ್ಡ್ ಗಳಲ್ಲಿ ಸಂಚರಿಸಿ ರೋಗಿಗಳ ಹಾಸಿಗೆ, ಚಿಕಿತ್ಸಾ ಕೋಣೆ ಸೇರಿದಂತೆ ಆಸ್ಪತ್ರೆಯ ಎಲ್ಲ ವ್ಯವಸ್ಥೆಗಳನ್ನು ವೀಕ್ಷಿಸಿದರು. ಔಷಧಿ ಕೋಣೆಗೆ ತೆರಳಿ ಔಷಧ ಲಭ್ಯತೆ ಮತ್ತು ವಿತರಣೆಯ ಬಗ್ಗೆ ವೈದ್ಯಾಧಿಕಾರಿಯಿಂದ ವಿವರಣೆ ಪಡೆದರು. ಅವಶ್ಯಕತೆಗೆ ಅನುಗುಣ ಔಷಧ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಮತ್ತು ಅವುಗಳನ್ನು ಸಮರ್ಪಕವಾಗಿ ವಿತರಿಸಬೇಕು. ಅವಧಿ ಮೀರಿದ ಔಷಧ ಇಟ್ಟುಕೊಳ್ಳುವುದು, ಔಷಧ ವಿತರಣೆಗೆ ರೋಗಿಗಳನ್ನು ಸತಾಯಿಸುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಸಿಬ್ಬಂದಿಯ ಹಾಜರಾತಿಯನ್ನು ಪರಿಶೀಲಿಸಿ, ಬಯೋಮೆಟ್ರಿಕ್ ಯಂತ್ರದ ಮೂಲಕ ಹಾಜರಾತಿ ಪಡೆದರೂ ಕೆಲವು ವೈದ್ಯರು ಮತ್ತು ಸಿಬ್ಬಂದಿ ಸಮಯಕ್ಕೆ ಹಾಜರಾತಿ ದಾಖಲಿಸಿ ತಮ್ಮ ಮನೆಗಳಿಗೆ ಹೋಗುತ್ತಿದ್ದಾರೆ ಎಂದು ಜನತೆ ಹೇಳುತ್ತಿದ್ದಾರೆ. ಇಂತಹ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಡಿಹೆಚ್‍ಓ ಅವರಿಗೆ ತಿಳಿಸಿದರು.

ಗ್ರಾಮೀಣ ಭಾಗದ ಜನತೆಗೆ ಸುಲಭವಾಗಿ ಆರೋಗ್ಯ ಸೇವೆಗಳು ಸಿಗಬೇಕೆಂಬ ಉದ್ದೇಶದಿಂದ ಸಾಕಷ್ಟು ಪರಿಶ್ರಮ ವಹಿಸಿ ಗ್ರಾಮದಲ್ಲಿ ಒಳ್ಳೆಯ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ವೈದ್ಯರು ಸರಿಯಾಗಿ ಕೆಲಸ ಮಾಡುವ ಮೂಲಕ ಆಸ್ಪತ್ರೆಯ ಸದುಪಯೋಗ ಆಗುವಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯಲ್ಲಿನ ಆಂಬ್ಯುಲೆನ್ಸ ಹಾಗೂ ಮತ್ತಿತರೆ ಉಪಕರಣಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಆಸ್ಪತ್ರೆಯಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳನ್ನು ಆಲಿಸಿದ ಶಾಸಕರು, ರಾತ್ರಿ ವೇಳೆ ವೈದ್ಯರು ಇರುತಿಲ್ಲವೆಂದು ಸಾರ್ವಜನಿಕರು ಪ್ರಸ್ತಾಪಿಸುತಿದ್ದಂತೆ ವೈದ್ಯಾಧಿಕಾರಿಯ ವಿರುದ್ಧ ಕೆಂಡಾಮಂಡಲರಾದ ಶಾಸಕರು, ವೈದ್ಯಕೀಯ ಸಿಬ್ಬಂದಿಯ ಹಾಜರಾತಿ ಕುರಿತಂತೆ ಜನರಿಂದ ನಿರಂತರ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಜನರಿಗೆ ಸ್ಪಂದಿಸದ ವೈದ್ಯರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ವೈದ್ಯರು ಮತ್ತು ಸಿಬ್ಬಂದಿ ದಿನದ 24 ಗಂಟೆಯೂ ಆಸ್ಪತ್ರೆಯಲ್ಲಿ ಲಭ್ಯವಿರಬೇಕು. ರಾತ್ರಿ ವೇಳೆ ಹೆರಿಗೆ ಪ್ರಕರಣಗಳು ಹೆಚ್ಚಾಗಿ ಕಾಣಿಸುತ್ತವೆ. ಇಂತಹ ಸಂದರ್ಭದಲ್ಲಿ ವೈದ್ಯರು ಇರುವುದಿಲ್ಲ ಎಂದರೆ ಗ್ರಾಮೀಣ ಭಾಗದ ಜನತೆ ಸಾಕಷ್ಟು ತಾಪತ್ರಯ ಎದುರಿಸಬೇಕಾಗುತ್ತದೆ. ಇನ್ನು ಮುಂದೆ ಇದು ನಡೆಯಬಾರದು. ಸರ್ಕಾರಿ ಆಸ್ಪತ್ರೆಗಳು ಉತ್ತಮ ಆರೋಗ್ಯ ಸೇವೆ ಒದಗಿಸಬೇಕು. ರೈತರು, ಕೂಲಿ ಕಾರ್ಮಿಕರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗೆ ಬರುವುದರಿಂದ ಎಲ್ಲರಿಗೂ ಉತ್ತಮ ಸೇವೆ ಸಿಗಬೇಕು. ಸಿಬ್ಬಂದಿ ಕೊರತೆಯಿರುವ ಆಸ್ಪತ್ರೆಗಳಿಗೆ ಶೀಘ್ರ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ಸ್ವಾಮಿ, ಮುಖಂಡರಾದ ಸತೀಷ ಪಾಟೀಲ, ದೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ ಸೇರಿದಂತೆ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.