ದಾನಿಗಳಿಂದ ಸರ್ಕಾರಿ ಶಾಲೆಗೆ ಹೈಟೆಕ್ ರೂಪ

ಶಿಡ್ಲಘಟ್ಟ,ಜು೨೩:ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಸರ್ಕಾರಿ ಶಾಲೆಗಳ ಮಧ್ಯೆ ಇಲ್ಲೊಂದು ಸರ್ಕಾರಿ ಶಾಲೆ ದಾನಿಗಳ ನೆರವಿನಿಂದ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲವೆಂಬಂತೆ ಹೈಟೆಕ್ ರೂಪ ಪಡೆದಿದೆ. ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ ಹೋಬಳಿಯ ದ್ಯಾವರಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯು ದಾನಿಗಳ ನೆರವಿನಿಂದ ಹೊಸ ರೂಪ ಪಡೆದು ಕಂಗೊಳಿಸುತ್ತಿದೆ.
ಮಾಜಿ ಜಿ.ಪಂ. ಸದಸ್ಯರಾದ ಶ್ರೀಮತಿ ಸುನೀತಾ ಶ್ರೀನಿವಾಸರೆಡ್ಡಿ ರವರು ತಮ್ಮ ಗ್ರಾಮದ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಶಾಲೆಯ ಸಂಪೂರ್ಣ ಅಭಿವೃದ್ಧಿಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈಗಾಗಲೇ ಬಶೆಟ್ಟಹಳ್ಳಿ ಹೋಬಳಿಯ ರಾಮಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಹಾಗೂ ಸಮುದಾಯ ಭವನದ ಅಭಿವೃದ್ಧಿ ಸೇರಿದಂತೆ ಹಲವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಇವರು ಇತ್ತೀಚಿಗೆ ತಮ್ಮ ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸೌಮ್ಯ ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ದೇವರಾಜ್ ಹಾಗೂ ಪೋಷಕರೊಂದಿಗೆ ಶಾಲೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸಿ , ಎಸ್.ಡಿ.ಎಂ.ಸಿ ಸಮಿತಿ ಮತ್ತು ಪೋಷಕರ ಒಪ್ಪಿಗೆ ಪಡೆದು ಶಾಲೆಯನ್ನು ದತ್ತು ಪಡೆದುಕೊಂಡು ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿಪಡಿಸುತ್ತಿದ್ದಾರೆ.
ಕೇವಲ ಒಂದೇ ತಿಂಗಳಲ್ಲಿ ತಮ್ಮ ಶಾಲೆಯನ್ನು ಇಷ್ಟೆಲ್ಲಾ ಅಭಿವೃದ್ಧಿಗೊಳಿಸಿದ್ದನ್ನು ಕಂಡು ಮಕ್ಕಳು ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದರು. ತಮ್ಮ ಶಾಲೆಯನ್ನು ಖಾಸಗಿ ಶಾಲೆಯ ಮಟ್ಟಿಗೆ ಅಭಿವೃದ್ಧಿಗೊಳಿಸಿದ ಸುನೀತಾ ಮೇಡಂ ರವರಿಗೆ ಮುಖ್ಯ ಶಿಕ್ಷಕಿ ಹಾಗೂ ಮಕ್ಕಳು ಧನ್ಯವಾದಗಳನ್ನು ಅರ್ಪಿಸಿದರು.