ದಾನಗಳಲ್ಲಿ ಶ್ರೇಷ್ಟ ದಾನ ರಕ್ತದಾನ: ವಿಮಲ್ ಸಿಂಗ್


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಜೂ.15: ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ನೀಡುವ ಅಮೂಲ್ಯ ಮತ್ತು ಶ್ರೇಷ್ಟ ಕೊಡುಗೆ ರಕ್ತದಾನವಾಗಿದೆ ಎಂದು ಬಿ.ಎಂ.ಎಂ.ಇಸ್ಪಾತ್ ಸಂಸ್ಥೆಯ ವಿಮಲ್ ಸಿಂಗ್ ಅಭಿಪ್ರಾಯಪಟ್ಟರು.
ಅವರು ಬುಧವಾರ ವಿಮ್ಸ್ ಬಳ್ಳಾರಿ, ಸರಕಾರಿ ಆಸ್ಪತ್ರೆ ಹೊಸಪೇಟೆ, ಕೆ.ಎಲ್.ಇ. ಸುಚಿರಾಯು ಆಸ್ಪತ್ರೆ ಹುಬ್ಬಳ್ಳಿ ಸಹಯೋಗದಲ್ಲಿ ಬಿ.ಎಂ.ಎಂ.ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ, ಉಚಿತ ಹೃದಯ ತಪಾಸಣೆ ಮತ್ತು ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯ ಮತ್ತಷ್ಟು ಸುಧಾರಿಸುತ್ತದೆ. ಅಲ್ಲದೇ ದಾನ ಪಡೆದ ವ್ಯಕ್ತಿಯ ಅಮೂಲ್ಯ ಜೀವವು ಉಳಿಯುತ್ತದೆ. ಒಬ್ಬ ವ್ಯಕ್ತಿಯ ಜೀವ ಉಳಿಸುವ ಶಕ್ತಿ ಇರುವುದು ಮನುಷ್ಯನ ರಕ್ತಕ್ಕೆ ಮಾತ್ರ. ಇದು ಕೃತಕವಾಗಿ ತಯಾರಿಸುವ ವಸ್ತುವಲ್ಲ, ರಕ್ತ ದಾನ ಒಂದು ಮಾನವೀಯ ಕಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಯಾವುದೇ ಒಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ವ್ಯಕ್ತಿಯ ದೇಹವು ಹೆಚ್ಚಿನ ಮಟ್ಟದಲ್ಲಿ ರಕ್ತ ಕಳೆದುಕೊಂಡಾಗ, ಅಥವಾ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾದಾಗ ರಕ್ತ ದೊರೆಯದೇ ಇದ್ದರೆ ಸಾವು ಸಹ ಸಂಭವಿಸಬಹುದು. ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡುವುದರಿಂದ ಒಂದು ಜೀವ ಉಳಿಸಿದ ಹೆಮ್ಮೆ ನಮ್ಮದಾಗುತ್ತದೆ ಎಂದು ತಿಳಿಸಿದರು.
ಬಿ.ಎಂ.ಎಂ.ಸಂಸ್ಥೆಯ ವೈದ್ಯಾಧಿಕಾರಿ ಡಾ.ಪಿ. ವಿಜಯ ವೆಂಕಟೇಶ್ ಮಾತನಾಡಿ, ಪ್ರತಿವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನ ಆಚರಿಸಲಾಗುತ್ತದೆ. ಇದರ ಉದ್ದೇಶ ಎಲ್ಲರಲ್ಲೂ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ರಕ್ತದೊತ್ತಡ, ಮಧುಮೇಹ, ಹೃದ್ರೋಗ, ನರರೋಗ ಇತ್ಯಾದಿ ಕಾಯಿಲೆಗಳಿರುವವರಲ್ಲಿ ರಕ್ತದ ಅವಶ್ಯಕತೆ ತೀವ್ರವಾಗಿರುತ್ತದೆ ಎಂದರು. ಅಪಘಾತ, ತುರ್ತುಸಂದರ್ಭ, ಹೆರಿಗೆ ಸಂದರ್ಭಗಳಲ್ಲೂ ರಕ್ತದ ಅವಶ್ಯಕತೆ ಇದೆ ಎಂದರು. ರಕ್ತದಾನ ಮಾಡುವುದರಿಂದ ಮನುಷ್ಯನಲ್ಲಿ ಹೊಸ ರಕ್ತ ಉತ್ಪತ್ತಿ, ಕಾರ್ಯತತ್ಪರತೆ, ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸುತ್ತದೆ. ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯ ಸ್ಥಿತಿ ಸುಧಾರಿಸುವುದಲ್ಲದೇ ರಕ್ತದಾನ ಪಡೆದ ವ್ಯಕ್ತಿಯ ಜೀವಕ್ಕೂ ಅನುಕೂಲವಾಗುತ್ತದೆ. ಅಲ್ಲದೇ ಇದೊಂದು ಸಾಮಾಜಿಕ ಜವಾಬ್ದಾರಿಯ ಕೊಡುಗೆಯಾಗುತ್ತದೆ ಎಂದ ಅವರು ಜಾತಿ, ಮತ, ಪಂಥ ಲೆಕ್ಕಿಸದೇ ಸರ್ವರನ್ನು ಒಂದು ಗೂಡಿಸುವ ಮಾನವೀಯ ಸಂಕೇತ ರಕ್ತದಾನವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವಿ.ವಿ.ವಿ. ರಾಜು, ಹಣಕಾಸು ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಜೇಂದ್ರ ಮುಂದ್ರಾ, ಸಂಸ್ಥೆಯ ಉಪಾಧ್ಯಕ್ಷ ಮನೀಷ್ ಡಿ.ವರ್ಣೇಕರ್, ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ್ ಹೆಗಡೆ, ಡಾ. ಕೆ.ಎಂ.ಅಂಜಿನಿ, ಡಾ.ಸುಧೀರ್, ಕೆ.ಎಲ್.ಇ. ಸುಚಿರಾಯು ಆಸ್ಪತ್ರೆಯ ಡಾ.ಪ್ರಿಯಾ, ವ್ಯವಸ್ಥಾಪಕರಾದ ಡೆನಿಲ್, ಎನ್.ಎಂ.ಆರ್.ಕ್ಯಾನ್ಸರ್ ಸೆಂಟರ್‌ನ ಡಾ.ಉಷಾ, ಕವಿತಾ, ಹೊಸಪೇಟೆ ಸಾರ್ವಜನಿಕ ಆಸ್ಪತ್ರೆಯ ಡಾ.ಸೋಮಶೇಖರ್, ರಕ್ತ ಭಂಡಾರದ ಜಗದೀಶ್, ಮರಿಯಮ್ಮನ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಮಂಜುಳಾ ಮತ್ತು ಸಿಬ್ಬಂದಿ, ಬಳ್ಳಾರಿ ವಿಮ್ಸ್ ರಕ್ತ ಭಂಡಾರದ ಡಾ.ಸುಮಿತ್ರಾ, ಮಲ್ಲಿಕಾರ್ಜುನ ಹಾಗೂ ಬಿ.ಎಂ.ಎಂ.ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.