ದಾದಿಯರು ಸಮಾಜ-ಆರೋಗ್ಯ ಕ್ಷೇತ್ರದ ಸೇತುವೆಯಾಗಿ ಕಾರ್ಯನಿರ್ವಹಣೆ

ಕಲಬುರಗಿ:ಮೇ.12: ವೈದ್ಯಕೀಯ ಕ್ಷೇತ್ರದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಿ, ಸದೃಢ ರಾಷ್ಟ್ರ ನಿರ್ಮಾಣದಲ್ಲಿ ದಾದಿಯರ ಕೊಡುಗೆ ಅನನ್ಯವಾಗಿದೆ. ಸಮಾಜ-ಆರೋಗ್ಯ ಕ್ಷೇತ್ರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ರೋಗಿಯ ಜೊತೆ ನಿರಂತರವಾಗಿದ್ದು, ಉಪಚಾರ ಮಾಡುವ ಮೂಲಕ ರೋಗವನ್ನು ಗುಣಪಡಿಸುತ್ತಾರೆ. ಅವರ ಸೇವೆಯನ್ನು ಕಾಯಂಗೊಳಿಸಿ, ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಬೇಕಾದದ್ದು ಸರ್ಕಾರದ ಕರ್ತವ್ಯವಾಗಿದ್ದು, ಇದರತ್ತ ಲಕ್ಷವಹಿಸಬೇಕಾಗಿದೆ ಎಂದು ಮಕ್ತಂಪುರ ಗುರುಬಸವ ಮಠದ ಪೂಜ್ಯ ಶಿವಾನಂದ ಶ್ರೀಗಳು ಹೇಳಿದರು.

ನಗರದ ಶೇಖ್‍ರೋಜಾದಲ್ಲಿರುವ ಶಹಬಜಾರ ‘ನಗರ ಪ್ರಾಥಮಿಕ ಆರೋಗ್ಯ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ’ಯ ಪ್ರಯುಕ್ತ ಆರೋಗ್ಯ ಕೇಂದ್ರದ ಎಲ್ಲಾ ದಾದಿಯರಿಗೆ ಏರ್ಪಡಿಸಿದ್ದ ಗೌರವಿಸಿ ಅವರು ಮಾತನಾಡಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ದಾದಿಯರ ಸೇವೆ ನಿರಂತರ ಮತ್ತು ಜವಬ್ದಾರಿಯುತವಾಗಿದೆ. ಪ್ರತಿ ವರ್ಷ ‘ಮೇ-12’ನ್ನು ‘‘ವಿಶ್ವ ದಾದಿಯರ ದಿನಾಚರಣೆ’’ಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ವಿಶ್ವದ್ಯಾದಂತ ಸೇವೆ ಸಲ್ಲಿಸುತ್ತಿರುವ ದಾದಿಯರನ್ನು ಸ್ಮರಿಸುವ ಉದ್ದೇಶವಾಗಿದೆ. ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನ ಇದಾಗಿದ್ದು, ಅವರು ಆಧುನಿಕ ನರ್ಸಿಂಗ್ ಶಿಕ್ಷಣಕ್ಕೆ ಬುನಾದಿಯನ್ನು ಹಾಕಿ ಸಂಘಟನೆಯನ್ನು ಮಾಡಿದ್ದಾರೆ. ನೈಟಿಂಗೇಲ್ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.

ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಕೇಂದ್ರದ ದಾದಿಯರಾದ ಗಂಗಾಜ್ಯೋತಿ ಗಂಜಿ, ಲಕ್ಷ್ಮೀ ಮೈಲಾರಿ, ಮಂಗಲಾ ಚಂದಾಪುರೆ, ಚಂದಮ್ಮ ಮರಾಠಾ, ರೇಶ್ಮಾ ನಕ್ಕುಂದಿ, ಅರ್ಚನಾ ಸಿಂಗೆ ಅವರಿಗೆ ಕೇಂದ್ರದಲ್ಲಿ ಸತ್ಕರಿಸಿ, ಶುಭಾಷಯ ಕೋರಲಾಯಿತು.

  ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಅನುಪಮಾ ಎಸ್.ಕೇಶ್ವಾರ, ಡಾ.ಸುನೀಲಕುಮಾರ ಎಚ್.ವಂಟಿ, ಶಿವಯೋಗಪ್ಪ ಬಿರಾದಾರ, ಪರಮೇಶ್ವರ ಬಿ.ದೇಸಾಯಿ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಬಸವರಾಜ ಗುತ್ತೇದಾರ, ಪುಷ್ಪಾ ಆರ್.ರತ್ನಹೊನ್ನದ್, ನಾಗೇಶ್ವರಿ ಮುಗಳಿವಾಡಿ, ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ಶರಣಬಸಪ್ಪ ಪೂಜಾರಿ, ಮಲ್ಲಿಕಾರ್ಜುನ ಕಾಕಂಡಕಿ, ಕಿರಣ ಪಾಟೀಲ, ನಾಗಮ್ಮ ಚಿಂಚೋಳಿ ಸೇರಿದಂತೆ ಇನ್ನಿತರರು ಇದ್ದರು.