ದಾಖಲೆ ಸೃಷ್ಟಿಸಿದ ಕೋಟಿ ಕಂಠ ಗಾಯನ : ಗುರುನಾಥ ರಾಜಗೀರಾ

ಬೀದರ:ಅ.29:ಹೊಸ ಸಂಕಲ್ಪಕ್ಕೆ ಕೋಟಿ ಕಂಠ ಗಾಯನ ಪ್ರೇರಣೆಯಾಗಿದೆ. ಹಳ್ಳಿಗಳಲ್ಲಿ, ಶಾಲೆಗಳಲ್ಲಿ, ಕಚೇರಿಗಳಲ್ಲಿ ಸೇರಿದಂತೆ ನಾಡಿನಾದ್ಯಂತ ಎಲ್ಲೆಡೆ ಸಹಸ್ರಾರು ಕಂಠಗಳಿಂದ ಕನ್ನಡ ಹಾಡು ಡಿಂಡಿಮಿಸಿದೆ. ಕನ್ನಡಕ್ಕಾಗಿ ನಾವೆಲ್ಲ ಒಂದಾಗಿದ್ದು ಈ ಮೂಲಕ ಕರ್ನಾಟಕದ ಭವಿಷ್ಯದ ಒಳಿತಿಗೆ ಸಂಕಲ್ಪ ಮಾಡಲು ಪ್ರೇರಣೆ ನೀಡಿದೆ. ಈ ನಿಟ್ಟಿನಲ್ಲಿ ನಮ್ಮ ಭಾಷೆಯನ್ನು ಉತ್ತುಂಗಕ್ಕೆ ಏರಿಸಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಈ ಅಭಿಯಾನ ಶ್ಲಾಘನೀಯವಾದದ್ದು ಜೊತೆಗೆ ಇದೊಂದು ದಾಖಲಾರ್ಹ ಕಾರ್ಯಕ್ರಮ ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ಗುರುನಾಥ ರಾಜಗೀರಾ ಹೇಳಿದರು.

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ಆಯೋಜಿಸಿದ ಕೋಟಿ ಕಂಠ ಗಾಯನ ಕಾರ್ಯಕ್ರಮದ ಪ್ರಯುಕ್ತ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಮಾತೃಭೂಮಿ ಸೇವಾ ಪ್ರತಿಷ್ಠಾನ ವತಿಯಿಂದ ಜಿಲ್ಲೆಯ 41 ಹಳ್ಳಿಗಳಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳ ಮುಲಕ ಕನ್ನಡ ಕಲಿಕಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು “ನನ್ನ ನಾಡು- ನನ್ನ ಹಾಡು” ಕೋಟಿ ಕಂಠ ಗಾಯನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲಾ ಕಲಿಕಾ ಕೇಂದ್ರಗಳಲ್ಲಿ ಎಕಕಾಲಕ್ಕೆ ಮೊಳಗಿದ 6 ಕನ್ನಡದ ಹಾಡು ‘ಕೋಟಿ ಕಂಠ ಗಾಯನ’ ದಲ್ಲಿ ನಾಡಗೀತೆಯಾದ ‘ಜಯ ಭಾರತ ಜನನೀಯ ತನುಜಾತೆ’, ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ‘ಬಾರಿಸು ಕನ್ನಡ ಡಿಂಡಿಮವ’, ‘ಹಚ್ಚೇವು ಕನ್ನಡದ ದೀಪ’, ‘ವಿಶ್ವವಿನೂತನ ವಿದ್ಯಾಚೇತನ’ ಹಾಗೂ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಒಟ್ಟು ಆರು ಕನ್ನಡದ ಗೀತೆಗಳು ಮಕ್ಕಳ ಕನ್ನಡದ ಕಂಠಗಳಿಂದ ಏಕಕಾಲಕ್ಕೆ ಮೊಳಗಿದ್ದು ವಿಶೇಷತೆಯಿಂದ ಕೂಡಿತ್ತು.

ಈ ಸಂದರ್ಭದಲ್ಲಿ ತಾಲ್ಲೂಕು ಮೇಲ್ವಿಚಾರಕಾರದ ವಿನೋದ ಪಾಟೀಲ, ಲೋಕೆಶ ಮೊಳಕೆರೆ, ಮಲ್ಲಿಕಾರ್ಜುನ, ಈಶ್ವರ ರುಮ್ಮಾ ಸೇರಿದಂತೆ ಶಿಕ್ಷಕಿಯರಿದ್ದರು.