ದಾಖಲೆ ಲಸಿಕೆ ವಿಪಕ್ಷಗಳಿಗೆ ಜ್ವರ

ನವದೆಹಲಿ, ಸೆ. ೧೮- ನಿನ್ನೆ ವಿಶ್ವ ದಾಖಲೆಯ ಲಸಿಕೀಕರಣದ ಬೆನ್ನಲ್ಲೇ ವಿರೋಧ ಪಕ್ಷದವರಿಗೆ ಜ್ವರ ಬಂದಂತಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ವಿಪಕ್ಷ ನಾಯಕರುಗಳ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದಲ್ಲಿ ಇತಿಹಾಸ ಸೃಷ್ಟಿಸುವಂತೆ ನಿನ್ನೆ ಒಂದೇ ದಿನ ೨.೫೦ ಕೋಟಿ ಕೋವಿಡ್ ಲಸಿಕೆ ನೀಡಲಾಗಿದ್ದು, ಇದರಿಂದ ಕಂಗೆಟ್ಟಿರುವ ಕಾಂಗ್ರೆಸ್‌ನ ಒಬ್ಬ ನಾಯಕರಿಗೆ ಜ್ವರ ಬಂದಿದೆ ಎಂದು ಅವರು ಲೇವಡಿ ಮಾಡಿದರು.
ಗೋವಾ ರಾಜ್ಯದ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಫಲಾನುಭವಿಗಳ ಜತೆ ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ನಿನ್ನೆ ವಿಶ್ವ ದಾಖಲೆಯ ಲಸಿಕೀಕರಣವಾಗಿರುವುದು ವಿರೋಧ ಪಕ್ಷಗಳ ಮೇಲೆ ಅಡ್ಡ ಪರಿಣಾಮ ಬೀರಿ ವಿರೋಧಿ ನಾಯಕರುಗಳಿಗೆ ಜ್ವರದ ಅನುಭವವಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನ ಭರದಿಂದ ಸಾಗಿದೆ. ಇಷ್ಟಾದರೂ ವಿಪಕ್ಷಗಳ ನಾಯಕರುಗಳು ಅದರಲ್ಲೂ ಕಾಂಗ್ರೆಸ್‌ನ ಮಹಾನ್ ನಾಯಕರೊಬ್ಬರು ಲಸಿಕೆ ಅಭಿಯಾನದ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ರಾಹುಲ್‌ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಲಸಿಕೆ ಪಡೆದ ನಂತರ ಅಡ್ಡಪರಿಣಾಮ ಸಹಜ ಎಂದ ಅವರು, ಪ್ರತಿಪಕ್ಷಗಳಿಗೆ ಕುಟುಕಿ ರಾಜಕೀಯ ಪಕ್ಷವೊಂದಕ್ಕೆ ೧೨ ಗಂಟೆಗಳ ಬಳಿಕ ಜ್ವರ ಬಂದಿದೆ. ಇಡೀ ರಾತ್ರಿ ಆ ಪಕ್ಷ ಜ್ವರದಿಂದ ಬಳಲಿದೆ. ಇದು ಹೇಗೆ ಸಾಧ್ಯ ಎಂದು ಪ್ರಧಾನಿ ಅವರು ಈ ಸಂವಾದ ಸಂದರ್ಭದಲ್ಲಿ ವೈದ್ಯರನ್ನು ಪ್ರಶ್ನಿಸುವ ಮೂಲಕ ರಾಜಕೀಯ ಪಕ್ಷಗಳ ವಿರುದ್ಧ ಕಿಡಿ ಕಾರಿದರು.
ವಿರೋಧಿ ಪಕ್ಷಗಳ ನಾಯಕರುಗಳ ಈ ಟೀಕೆಗಳಲ್ಲಿ ಸದುದ್ದೇಶ ಇದೆಯೇ ನೀವೇ ಹೇಳಿ ಎಂದು ಆರೋಗ್ಯ ಕಾರ್ಯಕರ್ತರನ್ನು ಪ್ರಶ್ನಿಸಿದರು.
ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಸ್ಥಳಗಳಲ್ಲಿ ಕೊರೊನಾ ಲಸಿಕೆಯನ್ನು ಆದ್ಯತೆ ಮೇಲೆ ನೀಡಿ
ಪ್ರವಾಸೋದ್ಯಮ ಸ್ಥಳಗಳನ್ನು ಆದಷ್ಟು ತ್ವರಿತವಾಗಿ ಕೋವಿಡ್ ಮುಕ್ತ ಮಾಡುವುದು ಬಹಳ ಮುಖ್ಯವಾಗಿತ್ತು. ಆರಂಭದಲ್ಲಿ ರಾಜಕೀಯ ಟೀಕೆಗಳು ಬರಬಹುದು ಎಂದು ಕೊಂಡಿದ್ದೆವು ಎಂದರು.
ಪ್ರವಾಸೋದ್ಯಮ ಸ್ಥಳಗಳನ್ನು ತ್ವರಿತವಾಗಿ ಕೋವಿಡ್ ಮುಕ್ತಗೊಳಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದು, ವಿದೇಶಿ ಪ್ರವಾಸಿಗರನ್ನು ಸೆಳೆಯಲು ೫ ಲಕ್ಷ ಮುಕ್ತ ವೀಸಾ ನೀಡಲು ಉದ್ದೇಶಿಸಲಾಗಿದೆ ಎಂದರು.
ದೇಶದಲ್ಲಿ ಕೋವಿಡ್ ಲಸಿಕೆ ನೀಡಿಕೆ ಭರದಿಂದ ಸಾಗಿದೆ. ಇದೇ ರೀತಿ ಲಸಿಕೀಕರಣವನ್ನು ಮುಂದುವರೆಸಿ ಎಂದು ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಿದರು.
ಕೋವಿಡ್ ಲಸಿಕೆ ತೆಗೆದುಕೊಂಡವರ ಕೆಲವರಲ್ಲಿ ಅಡ್ಡ ಪರಿಣಾಮವಾಗಿ ಜ್ವರ ಬರುತ್ತದೆ. ಆದರೆ, ನಿನ್ನೆಯ ದಾಖಲೆಯ ೨.೫೦ ಕೋಟಿ ಡೋಸ್ ಲಸಿಕೆ ನೀಡಿಕೆ ವಿರೋಧ ಪಕ್ಷಗಳಿಗೆ ಜ್ವರದ ಅನುಭವ ನೀಡಿದೆ ಎಂದು ಅವರು ವ್ಯಂಗ್ಯವಾಡಿದರು.
ದೇಶದ ದಾಖಲೆಯ ಲಸಿಕೀಕರಣದಲ್ಲಿ ಗೋವಾ ಪ್ರಮುಖಪಾತ್ರ ವಹಿಸಿದೆ. ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ನೇತೃತ್ವದಲ್ಲಿ ಗೋವಾ ಭಾರಿ ಮಳೆ, ಪ್ರವಾಹ, ಪ್ರಕೃತಿ ವಿಕೋಪಗಳ ನಡುವೆಯೂ ಕೋವಿಡ್ ಲಸಿಕೆ ನೀಡಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ದೇಶದ ಎಲ್ಲ ರಾಜ್ಯಗಳ ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದ ದಾಖಲೆಯ ಲಸಿಕೀಕರಣ ಸಾಧ್ಯವಾಗಿದೆ. ಎಲ್ಲ ಕೋವಿಡ್ ವಾರಿಯರ್‍ಸ್‌ಗಳಿಗೂ ಅಭಿನಂದನೆ ಹೇಳಿದರು.
ನಿನ್ನೆ ತಮ್ಮ ಜನ್ಮ ದಿನಾಚರಣೆ ಕುರಿತು ಮಾತನಾಡಿದ ಪ್ರಧಾನಿ ಮೋದಿ ಅವರು, ಜನ್ಮ ದಿನಗಳು ಬರುತ್ತವೆ ಹೋಗುತ್ತವೆ ಆದರೆ. ನಾನು ಇದರಿಂದ ದೂರ ಉಳಿದಿದ್ದೇನೆ. ಆದಾಗ್ಯೂ ನನ್ನ ವಯಸ್ಸಿಗೆ ನಿನ್ನೆಯ ದಿನ ಬಹಳ ಭಾವಪೂರ್ಣವಾಗಿತ್ತು ಎಂದು ಹೇಳುವ ಮೂಲಕ ತಮ್ಮ ಜನ್ಮದಿನದಂದೇ ನಡೆದ ಬೃಹತ್ ಲಸಿಕಾ ಅಭಿಯಾನ ವಿಶೇಷವಾಗಿತ್ತು ಎಂಬ ಅರ್ಥದಲ್ಲಿ ಅವರು ಹೇಳಿದರು.