ದಾಖಲೆ ಮಟ್ಟ ತಲುಪಿದ ಎಲ್‌ಪಿಜಿ ಮರು ಭರ್ತಿ

ನವದೆಹಲಿ, ನ.೮- ಲೋಕಸಭಾ ಹಾಗೂ ಕೆಲ ರಾಜ್ಯಗಳಲ್ಲಿ ಚುನಾವಣೆ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅಧಿಕ ಸಬ್ಸಿಡಿ ದೊರಯುತ್ತಿದ್ದು, ಅಡುಗೆ ಅನಿಲ ಸಿಲಿಂಡರ್‌ಗಳ ಮರು ಭರ್ತಿ ಇತ್ತೀಚಿನ ತಿಂಗಳುಗಳಲ್ಲಿ ದಾಖಲೆ ಮಟ್ಟ ತಲುಪಿದೆ.
ಕೇಂದ್ರ ಸರ್ಕಾರ ೯.೬ ಕೋಟಿ ಉಜ್ವಲ ಫಲಾನುಭವಿಗಳಿಗೆ ೨೦೦ ರೂಪಾಯಿ ಸಬ್ಸಿಡಿಯನ್ನು ಘೋಷಿಸಿ, ಬಳಿಕ ಅದನ್ನು ೩೦೦ ರೂಪಾಯಿಗೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ದೈನಿಕ ಮರುಭರ್ತಿ ಪ್ರಮಾಣ ೧೧ ಲಕ್ಷ ದಾಟಿದೆ.
ಅಕ್ಟೋಬರ್ ತಿಂಗಳಿನಲ್ಲಿ ದೈನಿಕ ಸಿಲಿಂಡರ್ ಮರುಭರ್ತಿ ಪ್ರಮಾಣ ೧೦.೩ ಲಕ್ಷ ಆಗಿದ್ದು, ಚುನಾವಣಾ ಪೂರ್ವದಲ್ಲಿ ಹಲವು ರಾಜ್ಯಗಳು ಕೂಡಾ ಎಲ್ ಪಿಜಿ ಸಬ್ಸಿಡಿ ಘೋಷಿಸಿರುವ ಹಿನ್ನೆಲೆಯಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ೨೦೨೦ರಲ್ಲಿ ಕೋವಿಡ್-೧೯ ಪರಿಹಾರ ಪ್ಯಾಕೇಜ್ ನಲ್ಲಿ ಪ್ರಯೋಜನಗಳು ಲಭ್ಯವಾಗುತ್ತಿದ್ದ ಹಿನ್ನೆಲೆಯಲ್ಲಿ ಸರಾಸರಿ ಬಳಕೆ ಹೆಚ್ಚಿತ್ತು.
ಉಜ್ವಲ ಫಲಾನುಭವಿಗಳಿಗೆ ದೀಪಾವಳಿ ಕೊಡುಗೆಯಾಗಿ ಉತ್ತರ ಪ್ರದೇಶ ಸರ್ಕಾರ ಉಚಿತ ಸಿಲಿಂಡರ್ ಗಳನ್ನು ನೀಡಿದ ಹಿನ್ನೆಲೆಯಲ್ಲಿ ಬೇಡಿಕೆ ಗಣನೀಯವಾಗಿ ಹೆಚ್ಚಿದೆ.
ವಿಧಾನಸಭಾ ಚುನಾವಣೆ ನಡೆಯುತ್ತಿರುವ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಮಹಿಳೆಯರಿಗೆ ೪೫೦ ರೂಪಾಯಿ ದರದಲ್ಲಿ ಸಿಲಿಂಡರ್ ಒದಗಿಸುತ್ತಿದೆ. ರಾಜಸ್ಥಾನ, ಛತ್ತೀಸ್ಗಢ ಮತ್ತು ಮಧ್ಯಪ್ರದೇಶದಲ್ಲಿ ೫೦೦ ರೂಪಾಯಿ ದರದಲ್ಲಿ ಸಿಲಿಂಡರ್ ಪೂರೈಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದೆ.
ಇದುವರೆಗೆ ಪ್ರತಿ ಕುಟುಂಬದ ವಾರ್ಷಿಕ ಸರಾಸರಿ ಸಿಲಿಂಡರ್ ಮರುಭರ್ತಿ ಪ್ರಮಾಣ ೩.೭ ಇದ್ದರೆ ಈ ವರ್ಷ ಅದು ೪.೫ ರಿಂದ ೫ಕ್ಕೆ ಹೆಚ್ಚುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.