
ಬೆಂಗಳೂರು, ಮೇ ೨೨- ಬಿಜೆಪಿ ಅವಧಿಯ ಹಗರಣಗಳ ತನಿಖೆ ಮಾಡುತ್ತೇವೆ ಎಂದಿರುವ ಕಾಂಗ್ರೆಸ್ ಪಕ್ಷ ದಯವಿಟ್ಟು ಎಲ್ಲಾ ತನಿಖೆ ಮಾಡಲಿ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಿಜೆಪಿ ಸರ್ಕಾರದ ಮೇಲಿನ ಶೇ. ೪೦ ರಷ್ಟು ಕಮೀಷನ್ ಆರೋಪವನ್ನು ಕಾಂಗ್ರೆಸ್ ಸರ್ಕಾರ ದಾಖಲೆ ಸಹಿತ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅವಧಿಯ ಹಗರಣಗಳ ತನಿಖೆ ಮಾಡುತ್ತೇವೆ ಎಂದಿರುವ ಕಾಂಗ್ರೆಸ್‌ಗೆ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ದಯವಿಟ್ಟು ಎಲ್ಲ ತನಿಖೆ ಮಾಡಲಿ. ೪೦ ಪರ್ಸೆಂಟ್ ಕಮೀಷನ್ ಆರೋಪವನ್ನು ನಮ್ಮ ಮೇಲೆ ಹೊರಿಸಿದ್ದಾರೆ. ೪೦ ಪರ್ಸೆಂಟ್ ಆಗಿದೆ ಎಂದು ಅವರು ಪುರಾವೆ ಸಮೇತ ತೋರಿಸಬೇಕು. ದಾಖಲೆಗಳನ್ನು ಕೊಡಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಇನ್ನು ಮೇಲೆ ಕೆಂಪಣ್ಣ ತಮ್ಮ ಸಂಘದ ಗುತ್ತಿಗೆದಾರರಿಗೆ ಶೇ. ೪೦ ರಷ್ಟು ಕಮ್ಮಿಗೆ ಟೆಂಡರ್ ಹಾಕುವಂತೆ ಹೇಳಬೇಕು ಎಂದು ವ್ಯಂಗ್ಯವಾಡಿದ ಅವರು, ಕೆಂಪಣ್ಣ ಇದುವರೆಗೂ ಶೇ. ೪೦ ರಷ್ಟು ಕಮೀಷನ್‌ಗೆ ದಾಖಲೆ ನಮಗೂ ಕೊಡಲಿಲ್ಲ. ಕೋರ್ಟ್‌ಗೂ ಕೊಡಲಿಲ್ಲ. ನಮ್ಮ ವಿರುದ್ಧ ಅಪಪ್ರಚಾರ ಮಾಡಿದರು. ಕಾಂಗ್ರೆಸ್‌ನವರು ಅದರ ಲಾಭ ತೆಗೆದುಕೊಂಡರು ಎಂದರು.
ಕಾಂಗ್ರೆಸ್‌ನವರು ನಮ್ಮ ಕಾಲದ, ಅವರ ಕಾಲದ ಎಲ್ಲವನ್ನು ತನಿಖೆ ಮಾಡಲಿ. ಪಿಎಸ್‌ಐ ಪ್ರಕರಣವನ್ನು ತನಿಖೆ ಮಾಡಲಿ. ಸತ್ಯ ಹೊರಗೆ ಬರಲಿ. ನಾವು ಕಾಂಗ್ರೆಸ್ ಕಾಲದ ಹಗರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೀವಿ ಎಂದರು.
ಬೆಂಗಳೂರಿನಲ್ಲಿ ನಿನ್ನೆ ಸುರಿದ ಕೆಲವೇ ಗಂಟೆಗಳ ಮಳೆಗೆ ಯುವತಿಯ ಸಾವು ಸಂಭವಿಸಿರುವುದು ನೋವಿನ ಸಂಗತಿ. ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದರೂ ಬಿಬಿಎಂಪಿ ಈ ವರ್ಷ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.