ದಾಖಲೆ ಇಲ್ಲದ 35.50 ಲಕ್ಷ ರೂ.ವಶ, ಮೂವರ ಬಂಧನ

ಕಲಬುರಗಿ,ಮಾ.30-ದಾಖಲೆ ಇಲ್ಲದೆ ಮಾರುತಿ ಕಾರಿನಲ್ಲಿ ಸಾಗಿಸುತ್ತಿದ್ದ 35.50 ಲಕ್ಷ ನಗದನ್ನು ಸೇಡಂ ತಾಲ್ಲೂಕಿನ ರಿಬ್ಬನ್‍ಪಲ್ಲಿ ಚೆಕ್ ಪೋಸ್ಟ್ ಸಿಬ್ಬಂದಿ ಬುಧವಾರ ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಪೆಂಜೆರ್ಲಾ ಗ್ರಾಮದ ಮಾಮಿಡಿ ದೇವಿಂದ್ರ ರೆಡ್ಡಿ, ಮಲ್ಲೇಶ್ ಹಾಗೂ ದಯಾಕರ ರೆಡ್ಡಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಮೂವರು ಕಾರಿನಲ್ಲಿ 35.50 ಲಕ್ಷ ರೂ. ಇರಿಸಿಕೊಂಡು ತೆಲಂಗಾಣದಿಂದ ಸೇಡಂ ಕಡೆ ಬರುತ್ತಿದ್ದರು. ರಿಬ್ಬನಪಲ್ಲಿ ಹತ್ತಿರವಿರುವ ಅಂತರರಾಜ್ಯ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ವೇಳೆ ಸಿಕ್ಕ ಹಣಕ್ಕೆ ಸೂಕ್ತ ದಾಖಲೆಗಳು ನೀಡದ ಕಾರಣ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.ಈ ಸಂಬಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.