ಅಥಣಿ :ಜೂ.25: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದಾಗ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ರಾಷ್ಟ್ರ ಮಟ್ಟದ ಮತ್ತು ರಾಜ್ಯ ಮಟ್ಟದ ನಾಯಕರನ್ನು ಕರೆಯಿಸಿ ನನ್ನನ್ನು ಸೋಲಿಸಲು ಪಣ ತೊಟ್ಟಿದ್ದರು. ಆದರೆ ಕ್ಷೇತ್ರದ ಮತದಾರ ಬಾಂಧವರು ನನಗೆ ಅಭೂತಪೂರ್ವ ಬೆಂಬಲ ನೀಡಿದ ಪರಿಣಾಮ ದಾಖಲೆ ಮತಗಳ ಅಂತರದಿಂದ ಗೆಲ್ಲಲು ಸಾಧ್ಯವಾಯಿತು, ಕ್ಷೇತ್ರದ ಮತದಾರರಿಗೆ ನಾನು ಯಾವತ್ತೂ ಚಿರಋಣಿಯಾಗಿರುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು,
ಅವರು ತಾಲೂಕಿನ ದರೂರ ಗ್ರಾಮದಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ ವತಿಯಿಂದ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟು ಅತೀ ಹೆಚ್ಚು ಮತಗಳನ್ನು ನೀಡಿ ನನ್ನ ಗೆಲುವಿಗೆ ಸಹಕಾರ ನೀಡಿದ ದರೂರ ಗ್ರಾಮದ ಮತದಾರರ ಋಣ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಇದೇ ಮೊದಲ ಬಾರಿಗೆ ದರೂರ ಗ್ರಾಮದ ಮತದಾರರು 1723 ಹೆಚ್ಚುವರಿ ಮತಗಳನ್ನು ನೀಡುವ ಮೂಲಕ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ ನಿಮ್ಮ ವಿಶ್ವಾಸಕ್ಕೆ ನಾನು ಎಂದಿಗೂ ಕೃತಜ್ಞನಾಗಿದ್ದು ದರೂರ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತ ಸದಸ್ಯರು ಮಾಡಿದ ಮನವಿಗೆ ನಾನು ಹಂತ ಹಂತವಾಗಿ ಸ್ಪಂದಿಸುವೆ ಗ್ರಾಮದಲ್ಲಿ ತುರ್ತಾಗಿ ಅನುಷ್ಠಾನಗೊಳ್ಳಬೇಕಿದ್ದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನನಗೆ ಮಾಹಿತಿ ನೀಡಿ ಆ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡುವೆ ಎಂದರು.
ಈ ಸಂದರ್ಭದಲ್ಲಿ ಕಾಗವಾಡ ಶಾಸಕ ರಾಜು ಕಾಗೆ. ದರೂರ ಗ್ರಾಮಸ್ಥರ ಪರವಾಗಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿ ದರೂರ ಗ್ರಾಮವು ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವುದಿಲ್ಲ ಆದರೆ 2004ರ ವರೆಗೆ ದರೂರ ಜಿ.ಪಂ ಕ್ಷೇತ್ರ ಕಾಗವಾಡ ಮತಕ್ಷೇತ್ರಕ್ಕೆ ಬರುತ್ತಿತ್ತು. ಹೀಗಾಗಿ ದರೂರ ಗ್ರಾಮದ ಜೊತೆಗೆ ನನಗೆ ಒಳ್ಳೆಯ ಸೌಹಾರ್ದ ಸಂಬಂಧ ಹೊಂದಿರುವೆ, ನಿಮ್ಮ ಯಾವುದೇ ಸಮಸ್ಯೆಗಳಿಗೆ ನಾನು ಮತ್ತು ಸವದಿ ಜೊತೆ ಗೂಡಿ ಪರಿಹರಿಸುವುದಾಗಿ ಎಂದು ಹೇಳಿದರು.
ಈ ವೇಳೆ ಇದೇ ಪ್ರಥಮ ಬಾರಿ ಕುಡಚಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಮಹೇಂದ್ರ ತಮ್ಮಣ್ಣವರ, ದರೂರ ಗ್ರಾಮಸ್ಥರ ಸನ್ಮಾನ ಸ್ವೀಕರಿಸಿ ಮಾತನಾಡಿ ಕುಡಚಿ ಕ್ಷೇತ್ರದಿಂದ ಶಾಸಕ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದೇನೆ ನನ್ನನ್ನು ನಿಮ್ಮ ಜೊತೆಗೆ ಕೊಂಡೊಯ್ಯಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಇವರಲ್ಲಿ ಮನವಿ ಮಾಡಿದರು.
ಗ್ರಾಮಸ್ಥರ ಪರವಾಗಿ ಮಾಜಿ ಜಿ ಪಂ, ಸದಸ್ಯ ಸುರೇಶ ಮಾಯಣ್ಣವರ ಮಾತನಾಡಿ ಶೇ 80 ರಷ್ಟು, ದರೂರ ಗ್ರಾಮದ ಮತದಾರರು ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಇವರನ್ನು ಬೆಂಬಲಿಸಿದ್ದು, ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ಕಾಂಗ್ರೆಸ್ ಮುಖಂಡ ಶ್ರೀಕಾಂತ ಅಸ್ಕಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಾದೇವ ಬಸಗೌಡರ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದರೂರ ಗ್ರಾ.ಪಂ ಅಧ್ಯಕ್ಷೆ ಪ್ರೇಮಾ ಕಾಂಬಳೆ ವಹಿಸಿದ್ದರು. ಸಂಜೀವ ಕಾಂಬಳೆ ನಿರೂಪಿಸಿ ವಂದಿಸಿದರು.
ಈ ಹಿಂದಿನ ಶಾಸಕರು 5ವರ್ಷಗಳ ಅವಧಿಯಲ್ಲಿ ಒಂದೇ ಒಂದು ತ್ರೈಮಾಸಿಕ (ಕೆಡಿಪಿ) ಸಭೆ ಅಥಣಿ ಹಾಗೂ ಕಾಗವಾಡ ಕ್ಷೇತ್ರದಲ್ಲಿ ನಡೆಯಲೇ ಇಲ್ಲ. ಹೀಗಾಗಿ ತಾಲೂಕಿನಲ್ಲಿ ಸರಕಾರಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ, ನಾನು ಚುನಾವಣೆಯಲ್ಲಿ ಆಯ್ಕೆಯಾದ ದಿನದಿಂದಲೇ ಆಡಳಿತ ಯಂತ್ರ ಸರಿ ಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವೆ ಜೊತೆಗೆ ಚುನಾವಣೆಯಾಗಿ ತಿಂಗಳೊಳಗೆ ಮೊದಲ ತ್ರೈಮಾಸಿಕ ಸಭೆ ಕೂಡ ನಡೆಸಿರುವೆ ಸರಕಾರಿ ಕಛೇರಿಗಳಲ್ಲಿ ನ್ಯಾಯಯುತ ಸರಕಾರಿ ಕೆಲಸಗಳಿಗೆ ಅಧಿಕಾರಿಗಳಾಗಲಿ ಅಥವಾ ಸಿಬ್ಬಂದಿಗಳಾಗಲಿ ಅಡತಡೆ ಮಾಡಿದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ,
ಲಕ್ಷ್ಮಣ ಸವದಿ,
ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕರು