ದಾಖಲೆಗಾಗಿ ಅಲೆದಾಟ ನಿಲ್ಲಿಸಿ ಅಧಿಕಾರಿಗಳಿಗೆ ಈಶ್ವರಪ್ಪ ಎಚ್ಚರಿಕೆ

ಬೆಂಗಳೂರು. ಜ. ೮- ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿಗಳಲ್ಲೂ ಗ್ರಾಮಸ್ಥರು ಕೇಳಿದ ದಾಖಲೆಗಳನ್ನು ತಕ್ಷಣವೇ ಒದಗಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಜನರನ್ನು ದಾಖಲೆಗಳಿಗಾಗಿ ಅಲೆದಾಡಿಸುವ ಪ್ರವೃತ್ತಿಯನ್ನು ನಿಲ್ಲಿಸಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದಲ್ಲಿಂದು ನಡೆದ ಎಲ್ಲ ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮುಖ್ಯ ಇಂಜಿನಿಯರ್‌ಗಳು ಹಾಗೂ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದಾಖಲೆಗಳಿಗಾಗಿ ಜನರನ್ನು ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಿ. ಜನರಿಗೆ ಅಗತ್ಯವಾದ ದಾಖಲೆಗಳನ್ನು ಸಕಾಲದಲ್ಲಿ ಒದಗಿಸಿ ಎಂದು ಅವರು ಹೇಳಿದರು.
ವಿದ್ಯುತ್ ಇಲ್ಲ, ಮೀಟಿಂಗ್ ಇದೆ, ನಾಳೆ ಬನ್ನಿ, ನಾಳಿದ್ದು ಬನ್ನಿ ಎಂದು ಜನರನ್ನು ಸತಾಯಿಸುತ್ತಿರುವ ದೂರುಗಳು ಬಂದಿವೆ. ಹಾಗಾಗಿ ಪ್ರತಿ ಗ್ರಾಮ ಪಂಚಾಯ್ತಿಗಳು ಸೋಲಾರ್ ವ್ಯವಸ್ಥೆಯನ್ನು ಮಾಡಿಕೊಂಡು ಜನರಿಗೆ ದಾಖಲೆಗಳನ್ನು ವಿಳಂಬ ಮಾಡದೆ ನೀಡಿ ಎಂದು ಅವರು ಸೂಚಿಸಿದರು.
ಗ್ರಾಮ ಪಂಚಾಯ್ತಿಗಳಲ್ಲಿ ಈಗ ಆಡಳಿತಾಧಿಕಾರಿಗಳ ಕಾಲ ಮುಗಿದಿದೆ. ಆಡಳಿತಾಧಿಕಾರಿಗಳು ಘನತ್ಯಾಜ್ಯ, ಶೌಚಾಲಯ ನಿರ್ಮಾಣ ಕಾರ್ಯಗಳನ್ನು ಯಾವ ರೀತಿ ನಿಗಾ ಇಟ್ಟಿದ್ದಾರೋ ಗೊತ್ತಿಲ್ಲ. ಆದರೆ ಇನ್ನೊಂದು ತಿಂಗಳಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ನೇಮಕವಾಗುತ್ತದೆ. ಚುನಾಯಿತ ಪ್ರತಿನಿಧಿಗಳು ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ ಗ್ರಾಮ ಪಂಚಾಯ್ತಿಗಳನ್ನು ಜನಸ್ನೇಹಿಯಾಗಿ ಪರಿವರ್ತಿಸಿ ಎಂದು ಅವರು ಹೇಳಿದರು.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಆದ್ಯ ಗಮನ ನೀಡಿ. ಕೇವಲ ೩ ಸಾವಿರ ಗ್ರಾಮ ಪಂಚಾಯ್ತಿಗಳು ಮಾತ್ರ ಘನತ್ಯಾಜ್ಯ ನಿರ್ವಹಣೆಗೆ ಕಾರ್ಯಕ್ರಮ ರೂಪಿಸಿವೆ. ಅವುಗಳಲ್ಲಿ ೬೮೫ ಗ್ರಾಮ ಪಂಚಾಯ್ತಿಗಳು ಮಾತ್ರ ಘನತ್ಯಾಜ್ಯ ನಿರ್ವಹಣಾ ಕಾರ್ಯವನ್ನು ಅನುಷ್ಠಾನಗೊಳಿಸಿವೆ. ಇದಕ್ಕೂ ವೇಗ ನೀಡಿ ಎಂದು ಅವರು ಸೂಚನೆ ನೀಡಿದರು.
ಘನತ್ಯಾಜ್ಯ ನಿರ್ವಹಣೆಗಾಗಿ ಜಾಗ ಗುರುತಿಸಿ ಜಿಲ್ಲಾಧಿಕಾರಿಗಳಿಂದ ಜಾಗ ಪಡೆಯಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆದರೂ ಹೇಳಿಕೊಳ್ಳುವಷ್ಟು ಕೆಲಸ ಆಗುತ್ತಿಲ್ಲ. ನಾನು ಮಂತ್ರಿಯಾಗಿ ಆದೇಶ ನೀಡುವುದಿಲ್ಲ, ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ, ಕಾರ್ಯಕ್ರಮಗಳ ಅನುಷ್ಠಾನಕ್ಕೆ ಗಮನ ಹರಿಸಿ ಎಂದು ಅಧಿಕಾರಿಗಳ ವಿರುದ್ಧ ನಯವಾಗಿಯೇ ಚಾಟಿ ಬೀಸಿದರು.
ಜನ ಬಹಿರ್ದೆಸೆಗಾಗಿ ಬಯಲಿಗೆ ಹೋಗುವುದನ್ನು ತಪ್ಪಿಸಲು ಶೌಚಾಲಯ ನಿರ್ಮಾಣಕ್ಕೆ ಗಮನ ನೀಡಲಾಗಿದೆ. ಶೌಚಾಲಯ ನಿರ್ಮಾಣಕ್ಕೆ ೧೨ ಸಾವಿರ ರೂ. ಸಹಾಯಧನ, ಪರಿಶಿಷ್ಟ ಜಾತಿ, ಪಂಗಡದವರಿಗೆ ೧೫ ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದ್ದರೂ ಜನ ಬಯಲಿಗೆ ಹೋಗುವುದನ್ನು ಬಿಟ್ಟಿಲ್ಲ. ಈ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಿ ಶೌಚಾಲಯ ನಿರ್ಮಾಣ ಹಾಗೂ ಬಳಕೆಗೆ ಜನರನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತಹ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆಯೂ ಅವರು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅರುಣ್ ಬರೂಖ, ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎ. ಅತೀಕ್, ಆಯುಕ್ತ ಡಾ. ವಿಶಾಲ್ ಮತ್ತಿತರರು ಉಪಸ್ಥಿತರಿದ್ದರು.