ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್ಯ ಮಹಿಳಾ ನಿಲಯದ ನಿವಾಸಿ

ಕಲಬುರಗಿ.ನ.29:ಕಲಬುರಗಿ ರಾಜ್ಯ ಮಹಿಳಾ ನಿಲಯದ ಮಹಿಳಾ ನಿವಾಸಿಯಾದ ಆಶಾ ಇವರ ವಿವಾಹವು ಕಲಬುರಗಿ ಆದರ್ಶ ಕಾಲೋನಿಯ ದಿ. ಶಂಕುತಲಾ ಹಾಗೂ ದಿ. ದತ್ತಾತ್ರೇಯ ಕುಲಕರ್ಣಿ ಇವರ ಪುತ್ರರಾದ ರಾಘವೇಂದ್ರ ಇವರೊಂದಿಗೆ ಬುಧವಾರ (ನವೆಂಬರ್ 24 ರಂದು) ನಡೆಯಿತು. ಈ ಮೂಲಕ ನಿವಾಸಿಯು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದಾರೆ ಎಂದು ಕಲಬುರಗಿ ರಾಜ್ಯ ಮಹಿಳಾ ನಿಲಯದ ಪ್ರಭಾರಿ ಅಧೀಕ್ಷಕಿ ಅಂಬಿಕಾ ಓಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮಹಿಳಾ ನಿಲಯದ ನಿವಾಸಿಯ ವಿವಾಹವನ್ನು ಸರಳ ಹಾಗೂ ಸಾಂಪ್ರದಾಯಿಕ ಪ್ರಕಾರ ನೆರವೇರಿಸಿ ವಿವಾಹ ನೋಂದಣಿ ಕಚೇರಿಯಲ್ಲಿ ನೊಂದಾಯಿಸಲಾಗಿದೆ. ಈ ವಿವಾಹ ಕಾರ್ಯಕ್ರಮದಲ್ಲಿ ಕಲಬುರಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಅಂಬಿಕಾ ಓಗಿ ಸೇರಿದಂತೆ, ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳ ಅಧೀಕ್ಷಕರು, ರಾಜ್ಯ ಮಹಿಳಾ ನಿಲಯದ ಸಿಬ್ಬಂದಿಗಳು ಹಾಗೂ ಮಹಿಳಾ ನಿಲಯದ ನಿವಾಸಿಗಳು ಭಾಗಿಯಾಗಿದ್ದರು.