ದಾಂಪತ್ಯಕ್ಕೆ ಕಾಲಿಟ್ಟ 548 ಜೋಡಿಗಳು

ಬೀದರ್:ಜು.26: ತಾಲ್ಲೂಕಿನ ರೇಕುಳಗಿ ಮೌಂಟ್‍ನ ಬೌದ್ಧ ವಿಹಾರದಲ್ಲಿ ಮಹಾ ಮಾನವ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸರಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ 548 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವಧು-ವರರು ಪರಸ್ಪರ ಹಾರ ಬದಲಿಸಿಕೊಂಡು ಸತಿ ಪತಿಗಳಾದರು.

ಬೌದ್ಧ ಧರ್ಮಗುರುಗಳು, ಜನಪ್ರತಿನಿಧಿಗಳು, ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕುಟುಂಬದ ಸದಸ್ಯರು, ಬಂಧುಗಳು ಅಪೂರ್ವ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದರು.

ಇಡೀ ಬೌದ್ಧ ವಿಹಾರದಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು. ಆಯೋಜಕರು ಸಮಾರಂಭವನ್ನು ಅಚ್ಚುಕಟ್ಟು ಹಾಗೂ ಸರಳವಾಗಿ ಆಯೋಜಿಸಿದ್ದು ಗಮನ ಸೆಳೆಯಿತು.

ಬಡವರಿಗೆ ಅನುಕೂಲ: ಸರಳ ಸಾಮೂಹಿಕ ವಿವಾಹಗಳಿಂದ ಬಡವರಿಗೆ ಅನುಕೂಲವಾಗಲಿದೆ ಎಂದು ವಿವಾಹ ಸಮಾರಂಭವನ್ನು ಉದ್ಘಾಟಿಸಿದ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಹೇಳಿದರು.

600 ವಧು, ವರರು ಹೆಸರು ನೋಂದಣಿ ಮಾಡಿಸಿದ್ದರು. 548 ಜೋಡಿಗಳು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಅಶೋಕ ಮಾಳಗೆ ತಿಳಿಸಿದರು.

ಸಂವಿಧಾನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ಮಹಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ್ ಮಾತನಾಡಿದರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಭಂತೆ ರೇವತ್, ಭಂತೆ ಧಮ್ಮಪಾಲ್ ಸಾನಿಧ್ಯ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಡಿ. ಫಸಿ ಪಟೇಲ್ ಅಧ್ಯಕ್ಷತೆ ವಹಿಸಿದ್ದರು.

ಮನ್ನಾಎಖ್ಖೆಳ್ಳಿ ಪಿಎಸ್‍ಐ ಸುದರ್ಶನ್ ರೆಡ್ಡಿ, ಪಿಡಿಒ ಸುಜಾತಾ ನಂದಿ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಪ್ರಮುಖರಾದ ಸಂಗಮೇಶ ನಾಸಿಗಾರ್, ಸುರೇಶ ಸಿಂಧೆ, ಬಾಬು ಸಂಗ್ರಾಮ, ಸುರೇಶ ಮಾಶೆಟ್ಟಿ, ರಾಜು ಶಿಂಧೆ ಉಪಸ್ಥಿತರಿದ್ದರು.

ಟ್ರಸ್ಟ್ ಕಾರ್ಯದರ್ಶಿ ಬಾಬು ಆಣದೂರು ಸ್ವಾಗತಿಸಿದರು. ಅರುಣ ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಕಾಶ ಡೋಳೆ ನಿರೂಪಿಸಿದರು. ಸುರೇಖಾ ವಂದಿಸಿದರು.

ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಪೆÇ್ರ. ಬಿ. ಕೃಷ್ಣಪ್ಪ ಅವರ ಜನ್ಮದಿನೋತ್ಸವ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಸರಳ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿತ್ತು.