ದಸ್ತಾಪೂರ್ ಮುಳುಗಡೆ ಪ್ರದೇಶವೆಂದು ಘೋಷಣೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ.ನ.05: ಜಿಲ್ಲೆಯ ಕಮಲಾಪೂರ್ ತಾಲ್ಲೂಕಿನ ದಸ್ತಾಪೂರ್ ಗ್ರಾಮವನ್ನು ಮುಳುಗಡೆ ಪ್ರದೇಶವೆಂದು ಘೋಷಿಸಿ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಗುರುವಾರ ಜಾತ್ಯಾತೀತ ಜನತಾದಳದ ಯುವ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ದಸ್ತಾಪೂರ್ ಗ್ರಾಮದ ಮೇಲುಗಡೆ ಬರುವ ಗಂಡೋರಿ ನಾಲಾ ಜಲಾಶಯದಿಂದ ಕಳೆದ 10ರಿಂದ 15 ವರ್ಷಗಳಿಂದ ಮಳೆಯಿಂದಾಗಿ ಊರಿನ ಮುಂದಿನ ಹಳ್ಳ ಹಾಗೂ ಗಂಡೋರಿ ನಾಲಾದ ನೀರಿನ ಪ್ರವಾಹದಿಂದ ಗ್ರಾಮಸ್ಥರು ಜಲಾವೃತಗೊಂಡು ಭೀತಿಗೆ ಒಳಗಾಗುತ್ತಿದ್ದಾರೆ. ಜನ ಹಾಗೂ ಜಾನುವಾರುಗಳು ಪ್ರಾಣಭಯದಿಂದ ಜೀವಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೂಡಲೇ ದಸ್ತಾಪೂರ್ ಗ್ರಾಮವನ್ನು ಮುಳುಗಡೆ ಪ್ರದೇಶವೆಂದು ಘೋಷಿಸುವಂತೆ, ಗ್ರಾಮದ ಹಳ್ಳದ ಹತ್ತಿರ ಇರುವ ಮಾದಿಗ ಸಮಾಜದ 12 ಮನೆಗಳನ್ನು ಸರ್ಕಾರ ಕೂಡಲೇ ಸ್ಥಳಾಂತರಿಸುವಂತೆ, ಹಳ್ಳದ ಪಕ್ಕದಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡವು ಸುಮಾರು ವರ್ಷಗಳಿಂದ ಹಳೆಯ ಕಟ್ಟಡದಲ್ಲಿದ್ದು, ಅದನ್ನು ಸ್ಥಳಾಂತರಿಸುವಂತೆ, ದಸ್ತಾಪೂರ್ ಗ್ರಾಮದ ಹತ್ತಿರ ಇರುವ ಸೇತುವೆ ಆರು ಅಡಿ ಇದ್ದು, ಅದನ್ನು 20 ಅಡಿಗೆ ಎತ್ತರಿಸುವಂತೆ, ದಸ್ತಾಪೂರ್ ಗ್ರಾಮವು ಸಂಪೂರ್ಣ ಜಲಾವೃತಗೊಂಡು ಬೆಳೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದ್ದು, ಕೂಡಲೇ ಬೆಳೆ ಹಾನಿ ಪರಿಹಾರ ಕೊಡುವಂತೆ ಅವರು ಒತ್ತಾಯಿಸಿದರು.
ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಅಲೀಮ್ ಇನಾಮದಾರ್, ಮುಖಂಡ ದೇವೆಗೌಡ ತೆಲ್ಲೂರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರವೀಣ್ ಎಲ್. ಜಾಧವ್, ಅರವಿಂದ್ ರಾಜೇರಿ, ನಾಗರಾಜ್, ಶೇಖ್ ಮೈನೂದ್ದೀನ್, ಶರಣು ದಸ್ತಾಪೂರ್ ಮುಂತಾದವರು ಪಾಲ್ಗೊಂಡಿದ್ದರು.