ದಸಾಪ ಬೆಳ್ಳಿ ಸಂಭ್ರಮ ಗೌರವ ಪ್ರಶಸ್ತಿಗೆ ಡಾ.ಗವಿಸಿದ್ಧಪ್ಪ ಆಯ್ಕೆ

ಕಲಬುರಗಿ,ಜು.15-ಡಾ.ಗವಿಸಿದ್ಧಪ್ಪ ಪಾಟೀಲ ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಬೆಳ್ಳಿ ಸಂಭ್ರಮದ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದೆಂದು ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಮತ್ತು ಕಾರ್ಯದರ್ಶಿ ಸುಭಾಷ ಹೊದ್ಲೂರ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಕಲಬುರಗಿ ವಲಯ ದಲಿತ ಸಾಹಿತ್ಯ ಪರಿಷತ್ತಿನ ಸಂಚಾಲಕ ಡಾ.ಗಾಂಧೀಜಿ ಮೊಳಕೇರಿ ತಿಳಿಸಿದ್ದಾರೆ.
ಡಾ.ಗವಿಸಿದ್ಧಪ್ಪ ಪಾಟೀಲ ಅವರು ಸೃಜನಶೀಲ, ಸಂವೇದನಾಶೀಲ ಬರಹಗಾರರು. ಕವಿಗಳಾಗಿ, ವಿಮರ್ಶಕರಾಗಿ, ಕಥೆಗಾರರಾಗಿ, ಜಾನಪದ-ವಚನ-ರಂಗಭೂಮಿ, ದಾಸ ಸಾಹಿತ್ಯ ವಿದ್ವಾಂಸರಾಗಿ, ಜೀವನ ಚರಿತ್ರೆ, ವ್ಯಕ್ತಿ ಚಿತ್ರಣ, ಅಭಿನಂದನಾÀ ಗ್ರಂಥ, ಪಠ್ಯ ಸಂಪಾದನೆ, ಸಂಪಾದನೆಗಳು ಸೇರಿ ತೊಂಬತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಪ್ರಶಸ್ತಿ, ಗೌರವಕ್ಕೆ ಪಾತ್ರರಾಗಿದ್ದಾರೆ. ಅಂಬೇಡ್ಕರ್ ಮತ್ತು ದಲಿತ ಸಾಹಿತ್ಯ ಕುರಿತು ಅನೇಕ ಲೇಖನ, ಪುಸ್ತಕ ಪ್ರಕಟಿಸಿ ದಲಿತ ಸಾಹಿತ್ಯ ಪರಿಷತ್ತಿಗೂ ದುಡಿದು, ಅನೇಕ ಕಾರ್ಯಕ್ರಮ ಮಾಡಿರುವರು. ತಾಲೂಕಾ ದಲಿತ ಸಮ್ಮೇಳನ ಸಂಯೋಜರಾಗಿ ಹದಿನಾರು ವರ್ಷದಲ್ಲಿ ಇಪ್ಪತ್ತೇಳು ಸಮ್ಮೇಳನ ನಡೆಸಿ ಸಮ್ಮೇಳನಗಳ ರೂವಾರಿ ಕೀರ್ತಿಗೆ ಹೆಸರಾದವರು. ಅವರ ಸಾಹಿತ್ಯ, ಸಂಘಟನೆ ಸೇವೆ ಪರಿಗಣಿಸಿ ಜುಲೈ 29 ಮತ್ತು 30ರಂದು ವಿಜಯಪುರದಲ್ಲಿ ಜರುಗುವ ಅಖಿಲ ಭಾರತ ಹತ್ತನೆಯ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಡಾ.ಮೊಳಕೇರಿ ತಿಳಿಸಿದ್ದಾರೆ.