ದಸರಾ ಮ್ಯಾರಥಾನ್‍ಗೆ ಚಾಲನೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.19:-ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿ ದಸರಾ ಮ್ಯಾರಥಾನ್ ನಡೆಯಿತು.
ಇಂದು ಬೆಳಿಗ್ಗೆಯೇ ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಲ್ಲಿಂದು ಸಮಾವೇಶಗೊಂಡಿದ್ದ ಪಟ್ಟಣದ ನಾಗರಿಕರು, ಅಧಿಕಾರಿಗಳು, ಸಿಬ್ಬಂದಿ, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದ ಮ್ಯಾರಥಾನ್‍ಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಹಸಿರು ನಿಶಾನೆ ತೋರಿದರು.
ಚಾಮರಾಜೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮ್ಯಾರಥಾನ್ ನಗರದ ಜೋಡಿರಸ್ತೆಯಲ್ಲಿ ಸಾಗಿ ಕೋರ್ಟ್ ರಸ್ತೆ, ಕರಿನಂಜನಪುರ ರಸ್ತೆ ಮೂಲಕ ಪ್ರವಾಸಿ ಮಂದಿರದಲ್ಲಿ ಅಂತ್ಯಗೊಂಡಿತು.
ಇದೇ ವೇಳೆ ಪ್ರವಾಸಿ ಮಂದಿರದ ಅವರಣದಲ್ಲಿ ದಸರಾ ಮ್ಯಾರಥಾನ್ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಯವರು ಜಿಲ್ಲಾಕೇಂದ್ರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಚಾಮರಾಜನಗರ ದಸರಾ ಮಹೋತ್ಸವದಲ್ಲಿ ಆಚರಿಸುವ ಸಂಭ್ರಮಗಳಲ್ಲಿ ದಸರಾ ಮ್ಯಾರಥಾನ್ ಕೂಡ ಒಂದಾಗಿದೆ. ಮಾರಥಾನ್‍ನಲ್ಲಿ 4ರಿಂದ 5 ಕಿ.ಮೀ ದೂರ ಕ್ರಮಿಸಲಾಗಿದೆ. ಎಲ್ಲರೂ ಸಹ ಉತ್ಸಾಹದಿಂದ ಮ್ಯಾರಥಾನ್‍ನಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಆರೋಗ್ಯ ಪ್ರತಿಯೊಬ್ಬರಿಗೂ ಮುಖ್ಯವಾಗಿದೆ. ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಮ್ಯಾರಥಾನ್ ಓಟ ಸಹಕಾರಿಯಾಗಲಿದೆ. ಸಕಾರಾತ್ಮಕ ಚಿಂತನೆಗಳು ನಮ್ಮಲ್ಲಿ ಜಾಗೃತಗೊಳ್ಳಲಿವೆ. ದಿನನಿತ್ಯದ ಜೀವನದ ಒತ್ತಡಗಳಿಗೆ ಪರಿಹಾರ ಕಂಡುಕೊಳ್ಳಲು ಮ್ಯಾರಥಾನ್ ನೆರವಾಗಲಿದೆ. ಪ್ರಸ್ತುತ ದಿನಗಳಲ್ಲಿ ಮಕ್ಕಳು ಹೊರಗಡೆ ಆಟ ಆಡುವುದೇ ಕಡಿಮೆಯಾಗಿದೆ. ಆ ಸಂಸ್ಕøತಿಯನ್ನು ಮಕ್ಕಳಲ್ಲಿ ಮತ್ತೆ ಬೆಳೆಸಬೇಕು. ಯುವಜನತೆಯಲ್ಲಿ ಆರೋಗ್ಯದ ಅರಿವು ಮೂಡಿಸುವುದು ಅನಿವಾರ್ಯವಾಗಿದೆ. ಎಲ್ಲರಿಗೂ ಸ್ಪೂರ್ತಿಯಾಗಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಮಚಂದ್ರರಾಜೇ ಅರಸ್, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಮಜುನಾಥ ಪ್ರಸನ್ನ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಸ್ವಾಮಿ, ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.