ನೆಲಮಂಗಲ,ಅ೨೭:ದಕ್ಷಿಣಕಾಶಿ ಶಿವಗಂಗೆಯ ಕ್ಷೇತ್ರ ಮಹತ್ವವನ್ನು ಸಾರುವ “ಸ್ಥಬ್ದ ಚಿತ್ರ’ವು ನಾಡಹಬ್ಬ ದಸರಾ ಜಂಬೂಸವಾರಿಯ ಮೆರವಣಿಗೆಯಲ್ಲಿ ರಾಜ್ಯದಾದ್ಯಂತ ಮತ್ತು ದೇಶದಾದ್ಯಂತ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ನೆಲಮಂಗಲ ತಾಲ್ಲೂಕಿನ ಪ್ರೇಕ್ಷಕರ ಗಮನಸೆಳೆಯಿತು.
ಜಗಧ್ವಿಖ್ಯಾತ ಮೈಸೂರು ದಸರಾ ನಾಡಹಬ್ಬದಲ್ಲಿ ಸತತವಾಗಿ ಎರಡು ಬಾರಿಗಳಲ್ಲಿಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಪ್ರತಿನಿಧಿಸಿರುವ ನೆಲಮಂಗಲ ತಾಲ್ಲೂಕಿನಲ್ಲಿ ಗತವೈಭವವನ್ನು ಸಾರುವ ಪುರಾಣ, ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಾಗೂ ಶೈಕ್ಷಣಿಕ ಹಿನ್ನೆಲೆಯನ್ನು ಸಾರುವ ಹಲವು ಮಜಲುಗಳ ಗಿರಿಶಿಖರಗಳು, ಪಾರಂಪರಿಕ ತಾಣಗಳನ್ನು ಹೊಂದಿರುವುದರ ಜೊತೆಗೆ ಗಂಗರಸರು, ಚೋಳರು, ನೃಪತುಂಗರು, ಕದಂಬರು, ಹೊಯ್ಸಳರು ಸೇರಿದಂತೆ ನಾಡನ್ನಾಳಿ ನೆಲಮಂಗಲಕ್ಕೆ ಕೊಡುಗೆ ನೀಡಿರುವ ಮೈಸೂರು ಮಹಾಸಂಸ್ಥಾನ ರಾಜ ಮಹಾರಾಜರು ಸಾಮಂತ ದೊರೆಗಳು ಸೇರಿದಂತೆ ಬೆಂಗಳೂರು ನಿರ್ಮಾತೃರಾದ ನಾಡಪ್ರಭು ಕೆಂಪೇಗೌಡರು, ವೀರಮದಕರಿ ನಾಯಕರ ಕಲಿಗಳ ಸಂಪರ್ಕ ಮತ್ತು ಕೊಡುಗೆಯಿರುವ ನೆಲಮಂಗಲದಲ್ಲಿ ಗತವೈವವುಳ್ಳ ಇತಿಹಾಸವಿದೆ.
ಈ ಹಿನ್ನೆಲೆಯಲ್ಲಿ ಬಗೆದಷ್ಟೂ ಐತಿಹಾಸಿಕ ಮತ್ತು ಇತಿಹಾಸದ ಪುಟಗಳು ತೆರೆದುಕೊಳ್ಳುವುದು ಮಾತ್ರವಲ್ಲದೇ ಧಾರ್ಮಿಕ ಮತ್ತು ಪುರಾಣ ಸಂಗತಿಗಳು ದಿಢೀರನೇ ತೆರೆದುಕೊಂಡು ತನ್ನ ಇರುವಿಕೆಯ ಸ್ಥಳನಾಮಗಳನ್ನು ಎಲ್ಲೆಡೆಯೂ ಹೊರಸೂಸುತ್ತದೆ.
ಕಳೆದ ಸಾಲಿನ ದಸರಾದಲ್ಲಿ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ಹೋಬಳಿಯ ಗಂಗರಸರ ರಾಜಧಾನಿಯಾಗಿದ್ದ ಮಾನ್ಯಪುರ(ಮಣ್ಣೆಯ) ಗತವೈಭವವನ್ನು ಸಾರುವ ಸ್ಥಬ್ದ ಚಿತ್ರವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತವು ಜಂಬೂಸವಾರಿಯಲ್ಲಿ ಪ್ರದರ್ಶಿಸಿತ್ತು. ಈ ಬಾರಿ ತಾಲ್ಲೂಕಿನ ದಕ್ಷಿಣಕಾಶಿ ಎಂದು ಪ್ರಸಿದ್ದವಾಗಿರುವ ಶಿವಗಂಗೆಯ ಕ್ಷೇತ್ರದ ಮಹತ್ವವನ್ನು ಸಾರುವ “ಸ್ಥಬ್ಧಚಿತ್ರ’ವನ್ನು ಆಯ್ಕೆಗೊಳಿಸಿ ತಾಲ್ಲೂಕಿನ ಕೀರ್ತಿಪತಾಕೆಯನ್ನು ಹಿಮ್ಮಡಿಗೊಳಿಸಿದ್ದು ನೆಲಮಂಗಲದ ಜನರಲ್ಲಿ ಹೇಳತೀರದ ಸಂತಸವನ್ನುಂಟು ಮಾಡಿದೆ.