ದಸರಾ ಮಾದರಿಯಲ್ಲಿ ಕೆಂಪೇಗೌಡ ಉತ್ಸವಕ್ಕೆ ಚಿಂತನೆ: ಡಾ.ರೇಣುಕಾಪ್ರಸಾದ್

????????????????????????????????????

ಪುತ್ತೂರು: ನಾಡಪ್ರಭು ಕೆಂಪೇಗೌಡ ಸಮಾಜಕ್ಕೆ ನೀಡಿದ ಕೊಡುಗೆ ದೊಡ್ಡದು. ಅವರ ಅಭಿವೃದ್ಧಿ ಕಾರ್ಯ, ದೂರದೃಷ್ಟಿತ್ವದ ಚಿಂತನೆ ಸದಾ ಪ್ರೇರಣಾದಾಯಿ ಈ ನಿಟ್ಟಿನಲ್ಲಿ ಅವರ ಜಯಂತೋತ್ಸವವನ್ನು ದಸರಾ ಮಾದರಿಯಲ್ಲಿ ಆಚರಣೆ ಮಾಡಬೇಕೆಂಬ ಚಿಂತನೆ ಇದೆ ಎಂದು ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ಕೆ.ವಿ. ರೇಣುಕಾಪ್ರಸಾದ್ ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ಪ್ರಾಯೋಜಕತ್ವದಲ್ಲಿ ಪುತ್ತೂರಿನ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ೫೧೩ನೇ ಜಯಂತೋತ್ಸವದಲ್ಲಿ ಅವರು ಸಂಸ್ಮರಣಾ ಜ್ಯೋತಿ ಬೆಳಗಿಸಿ ಮಾತನಾಡಿದರು. ನಾಡಪ್ರಭು ಕೆಂಪೇಗೌಡ ಆಚರಣೆ ಮಾಡುವ ನಿಟ್ಟಿನಲ್ಲಿ ತಾಲೂಕು ಸಂಘಗಳಿಗೆ ರೂ.೨೫ ಸಾವಿರ, ಜಿಲ್ಲೆಗೆ ರೂ.೫೦ ಸಾವಿರವನ್ನು ರಾಜ್ಯ ಒಕ್ಕಲಿಗರ ಸಂಘ ನೀಡುತ್ತಿದೆ ಎಂದರು.
ಒಕ್ಕಲಿಗ ಸಂಘದ ಮೂಲಕ ಎಲ್ಲಾ ಜಿಲ್ಲೆಗೆ ಸಮಾಜದ ವಸತಿ ನಿಲಯ ನೀಡಲಾಗುತ್ತದೆ. ಈ ಬಾರಿ ಸುಳ್ಯಕ್ಕೆ ಅದು ಮಂಜೂರಾಗಿದೆ. ಮುಂದೆ ಪುತ್ತೂರಿಗೂ ನೀಡಲಿದ್ದೇವೆ. ಒಕ್ಕಲಿಗರ ಪ್ರಾಧಿಕಾರದ ಮೂಲಕ ಅನೇಕ ಯೋಜನೆ ಇದೆ. ಅದನ್ನು ಉಪಯೋಗಿಸಿಕೊಳ್ಳಿ. ಕಟ್ಟಡಕ್ಕೂ ರೂ.೨೫ ಲಕ್ಷ ಕೊಡಲು ನಿರ್ಧಾರ ಕೈಗೊಂಡಿದೆ. ೫೦೦ ಮಂದಿಯ ವಸತಿ ನಿಲಯ ಕಟ್ಟಿದರೆ ರೂ.೧ ಕೋಟಿ ಅನುದಾನ ನೀಡಲಾಗುತ್ತದೆ ಎಂದು ಡಾ. ರೇಣುಕಾಪ್ರಸಾದ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಉಪಾಧ್ಯಕ್ಷ ಚಿದಾನಂದ ಬೈಲಾಡಿ, ರಾಜ್ಯ ಒಕ್ಕಲಿಗರ ಸಂಘದಲ್ಲ ಸಾಕಷ್ಟು ವ್ಯವಸ್ಥೆಗಳಿವೆ. ಅದನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಪ್ರತಿಭಾ ಪುರಸ್ಕಾರ ಪ್ರಾಯೋಜಕರಾಗಿರುವ ನಿವೃತ್ತ ಪ್ರಾಧ್ಯಾಪಕಿ ಲೀಲಾವತಿ ಶುಭಾಶಂಸನೆಗೈದರು.
ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದಿಂದ ಪ್ರತಿ ವರ್ಷದಂತೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಮನೋಹರ್ ಡಿ.ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಪ್ರಾಸ್ತಾವನೆಗೈದರು. ದಾಮೋದರ್ ಗೌಡ ನಂದಿಲ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿರ್ವಹಿಸಿದರು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ ಸ್ವಾಗತಿಸಿ, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ವಂದಿಸಿದರು. ವಸಂತ ವೀರಮಂಗಲ ಮತ್ತು ಪರಮೇಶ್ವರ ಗೌಡ ಕಾರ್ಯಕ್ರಮ ನಿರ್ವಹಿಸಿದರು.