ದಸರಾ ಮಹೋತ್ಸವ, ನಾಡಿದ್ದು ಹಂಸಲೇಖಾ ಚಾಲನೆ

ಮೈಸೂರು, ಅ.೧೩- ನಾಳಿದ್ದು ಚಾಮುಂಡಿ ಬೆಟ್ಟದಲ್ಲಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿ ಅವರಿಗೆ ಪೂಜೆ ಸಲ್ಲಿಸುವ ಮೂಲಕ ಖ್ಯಾತ ಸಿನಿಮಾ ಸಾಹಿತಿ ಹಾಗೂ ಚಲನಚಿತ್ರ ಸಂಗೀತ ನಿರ್ದೇಶಕ ನಾದಬ್ರಹ್ಮ ಡಾ.ಹಂಸಲೇಖ ದಸರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ನೀಡಲಿದ್ದಾರೆ.
ದೇವಿಯ ಸನ್ನಿಧಿಯಲ್ಲಿ ಅಕ್ಟೋಬರ್ ೧೫ ರಂದು ಬೆಳಗ್ಗೆ ೧೦:೧೫ ರಿಂದ ೧೦.೩೬ ರ ರೊಳಗೆ
ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಈ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದ ಘನ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಜಿ.ಟಿ ದೇವೇಗೌಡ ವಹಿಸಲಿದ್ದು, ಸಮಾರಂಭದ ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ ಪಾಟೀಲ್, ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ, ಇಂಧನ ಸಚಿವರಾದ ಕೆ.ಜೆ ಜಾರ್ಜ್ ಮತ್ತು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್ ಸುರೇಶ್ ಹಾಗೂ ಮೈಸೂರು ಮಹಾನಗರ ಪಾಲಿಕೆ ಮಹಾ ಪೌರರಾದ ಶಿವಕುಮಾರ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಲವು ಮಾರ್ಗಗಳು ಬಂದ್..!
ಆಯುಧ ಪೂಜೆ ಹಾಗೂ ದಸರಾ ಮೆರವಣಿಗೆ ಹಿನ್ನೆಲೆ ಯಲ್ಲಿ ಹಲವೆಡೆ ಅ.೨೩ ಮತ್ತು ೨೪ ರಂದು ಏಕಮುಖ ವಾಹನ ಸಂಚಾರದ ವ್ಯವಸ್ಥೆ ಮಾಡಲಾಗಿದೆ.
ಹಳೆ ಮೈಸೂರು-ಬೆಂಗಳೂರು ರಸ್ತೆಯ ಲಿಂಕ್ ರಸ್ತೆ ಜಂಕ್ಷನ್‌ನಿಂದ ರಾಜೇಂದ್ರನಗರ ರಸ್ತೆ, ಶಿವಾಜಿ ರಸ್ತೆ ಮಾರ್ಗವಾಗಿ ಡಾ.ರಾಜಕುಮಾರ್ ವೃತ್ತದವರೆಗೆ: ಲಿಂಕ್ ರಸ್ತೆಯ ಹಳೆ ಬೆಂಗಳೂರು – ಮೈಸೂರು ರಸ್ತೆ ಮಾರ್ಗವಾಗಿ ಬರುವ ವಾಹನಗಳು ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತ, ರಾಜೇಂದ್ರನಗರ ಮುಖ್ಯ ರಸ್ತೆ.
ಡಾ. ರಾಜಕುಮಾರ್ ವೃತ್ತದವರೆಗೆ ವಾಹನಗಳ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹಾಗೂ ಸದರಿ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುವ ಎಲ್ಲಾ ವಾಹನಗಳ ಸಂಚಾರವನ್ನು ಅ. ೨೩ ಮತ್ತು ಅ.೨೪ ರಂದು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.