ದಸರಾ ನಂತರ ಪ್ರಾಥಮಿಕ ಶಾಲೆಗಳ ಆರಂಭ : ಸಿ.ಎಂ.

ಮಂಗಳೂರು,ಅ.೧೩- ರಾಜ್ಯದಲ್ಲಿ ೧ ರಿಂದ ೫ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಹಾಗೂ ಕೇರಳ, ಮಹಾರಾಷ್ಟ್ರ ಗಡಿ ಭಾಗದ ಜಿಲ್ಲೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸಡಿಲಿಸುವ ಬಗ್ಗೆ ದಸರಾ ಹಬ್ಬದ ನಂತರ ನಡೆಯುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಹಾಗೂ ಸಚಿವರುಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳೂರಿನ ಕುಧ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದಸರಾ ಕಾರ್ಯಕ್ರದಲ್ಲಿ ಹಾಗೂ ಉಡುಪಿ ಜಿಲ್ಲೆಯ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂದು ಬೆಳಿಗ್ಗೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೇರಳ ಗಡಿ ಭಾಗದ ಜಿಲ್ಲೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಸಡಿಲಿಸಿ ಜನರಿಗೆ ಅನುಕೂಲ ಮಾಡಿಕೊಡುವ ಸಂಬಂಧ ತಜ್ಞರ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.
ಗಡಿ ಭಾಗದಲ್ಲಿ ಕೋವಿಡ್ ಸೋಂಕಿನ ಪ್ರಮಾಣ, ಲಸಿಕೀಕರಣ ಎಲ್ಲದರ ಬಗ್ಗೆಯೂ ಚರ್ಚಿಸಿ ತೀರ್ಮಾನ ಮಾಡುವುದಾಗಿ ಹೇಳಿದರು.
ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ೧ ರಿಂದ ೫ನೇ ತರಗತಿಗಳನ್ನು ಆರಂಭಿಸುವ ಬಗ್ಗೆಯೂ ಈ ಸಭೆಯಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.
ಕಲ್ಲಿದ್ದಲು ಸಮಸ್ಯೆ ಪರಿಹಾರ
ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧ ಈಗಾಗಲೇ ಕೆಂದ್ರದ ಕಲ್ಲಿದ್ದಲು ಸಚಿವ ಪ್ರಹ್ಲಾದ್‌ಜೋಷಿಯವರ ಜತೆ ಚರ್ಚೆ ನಡೆಸಿದ್ದೇನೆ. ರಾಜ್ಯಕ್ಕೆ ೮ ರೇಕು ಕಲ್ಲಿದ್ದಲು ಬರುತ್ತಿತ್ತು, ೧೦ ರೇಕು ಕಲ್ಲಿದ್ದಲು ಬಂದರೆ ಸಮಸ್ಯೆ ಬಗೆಹರಿಯುತ್ತದೆ. ಹೆಚ್ಚುವರಿ ೩ ರೇಕು ಕಲ್ಲಿದ್ದಲನ್ನು ರಾಜ್ಯಕ್ಕೆ ಸರಬರಾಜು ಮಾಡುವ ನಿಟ್ಟಿನಲ್ಲಿ ಮಾತುಕತೆಗಳು ನಡೆದಿವೆ. ಇನ್ನೆರೆಡು ಮೂರು ದಿನಗಳಲ್ಲಿ ಕಲ್ಲಿದ್ದಲಿನ ಸಮಸ್ಯೆ ಬಗೆಹರಿಯಲಿದೆ ಎಂದರು.
ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಸಂಬಂಧ ಕೇಂದ್ರದಿಂದ ಅಂತಿಮ ತೀರ್ಮಾನ ಹಾಗೂ ಮಾರ್ಗಸೂಚಿಗಳು ಆಗಬೇಕಿವೆ. ಇದಾದ ನಂತರ ರಾಜ್ಯದಲ್ಲೂ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಾಗುವುದು. ಲಸಿಕೆ ನೀಡಿಕೆಯಲ್ಲಿ ರಾಜ್ಯ ಮೊದಲಿದೆ. ಮಕ್ಕಳ ಲಸಿಕೆ ನೀಡಿಕೆಯಲ್ಲೂ ತ್ವರಿತ ಕಾರ್ಯಗಳು ಆಗಲಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಮಂಗಳೂರು ಸೇರಿದಂತೆ ಕೆಲವೆಡೆ ದಾಖಲಾಗಿರುವ ಪೊಲೀಸ್ ಪ್ರಕರಣಗಳನ್ನು ವಾಪಸ್ ಪಡೆಯುವ ಬಗ್ಗೆ ಮಾಹಿತಿ ಪಡೆದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದ ಅವರು, ಭತ್ತಕ್ಕೆ ಬೆಂಬಲ ಬೆಲೆ ನೀಡುವ ಸಂಬಂಧ ಸಚಿವ ಸಂಪುಟದ ಉಪ ಸಮಿತಿ ನಿರ್ಧಾರ ಮಾಡುತ್ತದೆ ಎಂದರು.
ನೈತಿಕತೆ ಬೇಕು
ನೈತಿಕ ಪೊಲೀಸ್ ಗಿರಿ ಅತ್ಯಂತ ಸೂಕ್ಷ್ಮದ ವಿಚಾರ, ಸಮಾಜದಲ್ಲಿ ಜವಾಬ್ದಾರಿ ಎಲ್ಲರಲ್ಲೂ ಬರಬೇಕು, ಸಮಾಜದಲ್ಲಿ ಕೆಲವೊಂದು ಭಾವನೆಗಳಿವೆ. ಆ ಭಾವನೆಗಳಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆಯಾದಾಗ ಸಹಜವಾಗಿ ಕ್ರಿಯೆ-ಪ್ರಕ್ರಿಯೆಗಳು ಆಗುತ್ತವೆ. ಆದ್ದರಿಂದ ಸರ್ಕಾರದ ಕರ್ತವ್ಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ, ಸಾಮರಸ್ಯ ಕಾಪಾಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಲರೂ ಸಹಕಾರ ನೀಡಬೇಕು. ಸಮಾಜದ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಇದು ಸಾಮಾಜಿಕ ಪ್ರಶ್ನೆಯಾಗಿದೆ. ಎಲ್ಲರಿಗೂ ನೈತಿಕತೆ ಬೇಕು. ಸಮಾಜದಲ್ಲಿ ನೈತಿಕತೆ ಬೇಕೇಬೇಕು. ನೈತಿಕತೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ಶಾಂತಿ ಸುವ್ಯವಸ್ಥೆ, ಸಂಬಂಧಗಳು, ಬಾಂಧವ್ಯಗಳು ನಿಂತಿರುವುದೇ ನೈತಿಕತೆಯ ಮೇಲೆ, ನೈತಿಕತೆ ಇಲ್ಲದಾಗ ಇಂತದೆಲ್ಲ ಆಗುತ್ತದೆ. ಹಾಗಾಗಿ ಪ್ರತಿಯೊಬ್ಬರದ್ದು ಹೊಣೆಗಾರಿಕೆ ಇದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕೋಟಿಗಟ್ಟಲೆ ಹಣ ಮಾಡಿಕೊಂಡಿದ್ದಾರಂಬ ಕೆಲ ಕಾಂಗ್ರೆಸ್ ನಾಯಕರ ಮಾತುಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮುಖ್ಯಮಂತ್ರಿಗಳು ಯಾರೋ ಎಲ್ಲೋ ಖಾಸಗಿಯಾಗಿ ಮಾತನಾಡಿಕೊಂಡಿದ್ದಕ್ಕೆಲ್ಲ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.