
ಮೈಸೂರು,ಆ.೯-ನಾಡಹಬ್ಬ ದಸರಾ ಇನ್ನು ಕೆಲವೇ ತಿಂಗಳುಗಳು ಬಾಕಿ ಇದೆ. ಈ ಹಿನ್ನೆಲೆ, ಈಗಿನಿಂದಲೇ ದಸರಾ ಹಬ್ಬಕ್ಕೆ ಮೈಸೂರು ಸಜ್ಜಾಗುತ್ತಿದ್ದು, ಅದರಲ್ಲೂ ದಸರಾದಲ್ಲಿ ಪ್ರಮುಖ ಆಕರ್ಷಣೆ ಎಂದರೆ ಅದು ಜಂಬೂಸವಾರಿ. ಹೀಗಾಗಿ ಈ ಬಾರಿಯೂ ಅದ್ಧೂರಿಯಾಗಿ ಜಂಬೂ ಸವಾರಿ ನಡೆಯಲಿದ್ದು, ಇದಕ್ಕಾಗಿ ದಸರಾ ಗಜಪಡೆಯ ಮೊದಲ ಪಟ್ಟಿಯನ್ನು ಇಂದು ಅಂತಿಮಗೊಳಿಸಲಾಗಿದೆ.
ದಸರಾ ಮಹೋತ್ಸವಕ್ಕೆ ಮೈಸೂರಿಗೆ ಆಗಮಿಸುವ ಗಜಪಡೆಯ ಮೊದಲ ಪಟ್ಟಿ ತಯಾರಾಗಿದೆ. ಮೊದಲ ಹಂತದಲ್ಲಿ ಬರುವ ೯ ಆನೆಗಳ ಪಟ್ಟಿಯನ್ನು ಅರಣ್ಯಾಧಿಕಾರಿಗಳು ಅಂತಿಮಗೊಳಿಸಿದ್ದಾರೆ. ನಾಗರಹೊಳೆ ಆನೆ ಶಿಬಿರದಿಂದ ಅಭಿಮನ್ಯು, ಭೀಮ, ಮಹೇಂದ್ರ ಆನೆಗಳು, ನಾಗರಹೊಳೆಯ ಬಳ್ಳೆ ಆನೆ ಶಿಬಿರದಿಂದ ಅರ್ಜುನ ಆನೆ, ದುಬಾರೆ ಆನೆ ಶಿಬಿರದಿಂದ ಧನಂಜಯ, ಗೋಪಿ, ವಿಜಯ ಆನೆಗಳು, ಬಂಡೀಪುರದ ರಾಮಪುರ ಶಿಬಿರದಿಂದ ಪಾರ್ಥ ಸಾರಥಿ, ಭೀಮನಕಟ್ಟೆ ಆನೆ ಶಿಬಿರದಿಂದ ವರಲಕ್ಷ್ಮಿ ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿವೆ.ಈ ಬಾರಿಯೂ ಕ್ಯಾಪ್ಟನ್ ಅಭಿಮನ್ಯ ಮುಂದಾಳತ್ವದಲ್ಲೇ ಜಂಬೂಸವಾರಿ ನಡೆಯಲಿದ್ದು, ಅಂಬಾರಿ ಅಭಿಮನ್ಯು ಮೈಸೂರು ಅರಮನೆ ಬೀದಿಗಳಲ್ಲಿ ಹೆಜ್ಜೆ ಹಾಕಲಿದೆ. ಉಳಿದ ಆನೆಗಳು ಅಭಿಮನ್ಯಗೆ ಸಾಥ್ ನೀಡಲಿದೆ.