(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.25: ನಗರದಲ್ಲಿ ಕಳೆದ ಎರಡು ದಿನಗಳಿಂದ ನಡೆದ ದಸರಾ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ `ಆಜಾದ್’ ಕ್ರಿಕೆಟ್ ತಂಡ ಚಾಂಪಿಯನ್ ಆಗಿದೆ.
ನಗರದ ಚಲುವಾದಿ ಬೀದಿಯ ಇರ್ಫಾನ್, ಶಂಕರ್ ಮತ್ತವರ ಸ್ನೇಹಿತರು, ಆಯುಧಪೂಜಾ, ವಿಜಯದಶಮಿ ಹಬ್ಬದ ನಿಮಿತ್ತ ಜಿಲ್ಲಾ ಕ್ರೀಡಾಂಗಣ ಪಕ್ಕದ ಲೆದರ್ ಬಾಲ್ ಕ್ರಿಕೇಟ್ ಮೈದಾನದಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಿದ್ದರು.
ಪಂದ್ಯಾವಳಿಯಲ್ಲಿ ಬಳ್ಳಾರಿ ಲಯನ್ಸ್, ಜೇಮ್ಸ್, ಅಪ್ಪು ಲೆವೆನ್, ಲೆವೆನ್ ಸ್ಟರ‍್ಸ್, ಕಮೇಲಾ ಬಾಯ್ಸ್, ಆಜಾದ್ ತಂಡ ಸೇರಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು.
ಲೀಗ್, ಸೆಮಿಫೈನಲ್, ಫೈನಲ್ ಸೇರಿ ಸತತ ಮೂರು ಪಂದ್ಯಗಳನ್ನು ಅತ್ಯಂತ ರೋಚಕವಾಗಿ ಗೆಲ್ಲುವ ಮೂಲಕ `ಆಜಾದ್’ ತಂಡ ಕಪ್‌ನ್ನು ತನ್ನ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಫೈನಲ್ ಪಂದ್ಯ ಆಜಾದ್ ಮತ್ತು ಕಮೇಲಾ ಬಾಯ್ಸ್ ತಂಡಗಳ ನಡುವೆ ನಡೆಯಿತು. ಕಮೇಲಾ ಬಾಯ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದರಿಂದ ಆಜಾದ್ ತಂಡ ಮೊದಲು ಬ್ಯಾಂಟಿಂಗ್ ಮಾಡಲು ಕಣಕ್ಕಿಳಿಯಿತು. ಆರಂಭಿಕ ಆಟಗಾರರಾಗಿ ಮಸ್ತಾನ್ ೨೬, ರಾಕೇಶ್ ೨೬ ರನ್‌ಗಳನ್ನು ಕಲೆಹಾಕುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸುವುದರ ಜತೆಗೆ ತಂಡಕ್ಕೆ ಉತ್ತಮ ಮೊತ್ತವನ್ನು ತಂದುಕೊಡುವಲ್ಲೂ ಯಶಸ್ವಿಯಾದರು. ಕೊನೆಯ ಓವರ್‌ನಲ್ಲಿ ಕಣಕ್ಕಿಳಿದ ಪವನ್ ೮, ವೆಂಕೋಬಿ ೨ ರನ್ ತಂಡದ ಮೊತ್ತಕ್ಕೆ ಪೇರಿಸಿದರು. ಅಂತಿಮವಾಗಿ ೧೦ ಓವರ್‌ಗಳಲ್ಲಿ ಒಟ್ಟು ೮೪ ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಗೆಲುವಿಗೆ ಬೇಕಾದ ೮೫ ರನ್‌ಗಳನ್ನು ಬೆನ್ನಟ್ಟಲು ಕಣಕ್ಕಿಳಿದ ಕಮೇಲಾ ಬಾಯ್ಸ್ ಉತ್ತಮ ಆರಂಭ ಕಂಡುಕೊAಡಿತಾದರೂ, ಆರಂಭಿಕ ಆಟಗಾರರಾದ ತಮ್ಮಣ್ಣ ೨, ಅಲ್ತಾಫ್ ೧೫ ರನ್ ಬಾರಿಸಿ, ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿಯದೇ ಮುಗ್ಗರಿಸಿದರು. ಬಳಿಕ ಕ್ರೀಸ್‌ಗಿಳಿದ ವಿಜಯ್ ಉತ್ತಮ ಹೊಡೆತಗನ್ನು ಬಾರಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರು. ಆದರೆ, ಇವರಿಗೆ ಜೊತೆಯಾಗಿದ್ದ ವೀರೇಶ್ ಉತ್ತಮ ಸಾಥ್ ನೀಡುವಲ್ಲಿ ವಿಫಲರಾದರು. ಅಂತಿಮವಾಗಿ ೧೦ ಓವರ್‌ಗಳಲ್ಲಿ ವಿಜಯ್ ೨೪, ವೀರೇಶ್ ೧೨ ರನ್ ಸೇರಿ ೮೦ ರನ್‌ಗಳನ್ನು ಕಲೆಹಾಕುವಲ್ಲಷ್ಟೇ ಶಕ್ತರಾದರು. ಆಜಾದ್ ತಂಡದ ಪೊಲೀಸ್ ವೆಂಕಟೇಶ್, ಭರತ್, ಹುಸೇನ್, ಮಸ್ತಾನ್ ಉತ್ತಮ ಬೌಲಿಂಗ್ ಮಾಡುವ ಮೂಲಕ ತಂಡವನ್ನು ಎದುರಾಳಿ ತಂಡವನ್ನು ಕಟ್ಟಿಹಾಕುವುದರ ಜತೆಗೆ ೫ ರನ್‌ಗಳಿಂದ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಸೀನಾ, ವೆಂಕೋಬಿ ತಂಡವನ್ನು ಉತ್ತಮವಾಗಿ ನಿರ್ವಹಿಸಿದರು. ತಂಡದ ದಾಂಡಿಗರಾದ ನಿಖೀಲ್, ಮನೋಜ್, ಪವನ್ ಉತ್ತಮ ಫೀಲ್ಡಿಂಗ್ ಪ್ರದರ್ಶಿಸಿದರು. ತಂಡದ ಹಿರಿಯರಾದ ಬಾಲಕೃಷ್ಣ, ಇಂದ್ರಣ್ಣ ಬಾಬು, ಶ್ರೀನಿವಾಸ್, ಬಸವರಾಜ, ನಾಗಪ್ಪ, ಮಾಜಿ ಸೈನಿಕ ನಾಗರಾಜ್, ನಾಗರಾಜ್, ಮಣಿಕಂಠ ಸೇರಿ ಹಲವರು ತಂಡವನ್ನು ಉತ್ತಮವಾಗಿ ಪ್ರೋತ್ಸಾಹಿಸಿದರು.