ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡುವಂತೆ ಒತ್ತಾಯ

ಮೈಸೂರು,ಸೆ.16:- ಮೈಸೂರು ದಸರಾ ಮಹೋತ್ಸವ 2020 ಅಂಗವಾಗಿ ಮೈಸೂರಿನ ಅರಮನೆ ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈ ಬಾರಿ ಕಡ್ಡಾಯವಾಗಿ ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆಯನ್ನು ನೀಡಬೇಕು. ಮೈಸೂರಿನ ವಿವಿಧ ಏಳು ಸಭಾಂಗಣ/ರಂಗಮಂದಿರಗಳಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೋವಿಡ್-19 ನೆಪವೊಡ್ಡಿ ರದ್ದುಗೊಳಿಸದೆ ಪ್ರತಿವರ್ಷದಂತೆ ಈ ಬಾರಿಯೂ ಕೂಡ ಮುಂದುವರಿಸಿ ಸ್ಥಳೀಯ ವೃತ್ತಿ ಕಲಾವಿದರಿಗೆ ಅವಕಾಶ ಮಾಡಿಕೊಡುವಂತೆ ಮೈಸೂರು ನಗರ ಮತ್ತು ಜಿಲ್ಲಾ ಸಾಂಸ್ಕೃತಿಕ ವೃತ್ತಿ ಕಲಾವಿದರ ಸಮಿತಿ ಒತ್ತಾಯಿಸಿದೆ.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಪುಟ್ಟಸ್ವಾಮಿ ಮಾತನಾಡಿ ಕೊರೋನಾ ಮಹಾಮಾರಿ ವಿಶ್ವದಾದ್ಯಂತ ಹರಡಿದ್ದು ಜನತೆಯನ್ನು ಆತಂಕಕ್ಕೊಳಪಡಿಸಿದೆ. ಇಂತಹ ಸಂಕಷ್ಟಪರಿಸ್ಥಿತಿಯಲ್ಲಿ ಕಲೆಯನ್ನೇ ನಂಬಿಕೊಂಡು ಅದರಿಂದ ಬರುವ ಆದಾಯದಿಂದ ಜೀವನ ಸಾಗಿಸುತ್ತಿದ್ದ ವಿವಿಧ ಪ್ರಕಾರದ ವೃತ್ತಿ ಕಲಾವಿದರು ಆರ್ಥಿಕವಾಗಿ ತೊಂದರೆಗೆ ಒಳಗಾಗಿದ್ದು ಅವರ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಸುಮಾರು 7ತಿಂಗಳಿನಿಂದ ಲಾಕ್ ಡೌನ್ ಮತ್ತು ಕೊರೋನಾ ಸೋಂಕಿನ ಕಾರಣದಿಂದ ವೃತ್ತಿ ಕಲಾವಿದರಿಗೆ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ದೊರಕದೆ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ವರಮಾನ ಮೂಲವಿಲ್ಲದೆ ಕಲಾವಿದರು ಮತ್ತವರ ಕುಟುಂಬ ಬೀದಿಗೆ ಬಂದು ನಿಲ್ಲುವ ದುಃಸ್ಥಿತಿ ಒದಗಿದೆ. ಇಂತಹ ಆತಂಕಕಾರಿ ಪರಿಸ್ಥಿತಿಯಲ್ಲಿ ಸರ್ಕಾರವು ಕಲಾವಿದರ ಹಿತಾಸಕ್ತಿಯನ್ನು ಕಡೆಗಣಿಸಿರುವುದು ಖಂಡನೀಯ ಎಂದರು.
ಪ್ರತಿವರ್ಷದಂತೆ ಮೈಸೂರು ದಸರಾ ಮಹೋತ್ಸವ-2020 ಅಂಗವಾಗಿ ಅರಮನೆ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರನ್ನು ನಿರ್ಲಕ್ಷ್ಯಿಸಿ ಹೊರಗಡೆ ಕಲಾವಿದರಿಗೆ ಮಾತ್ರ ಆದ್ಯತೆ ನೀಡುತ್ತಿರುವುದು ಸರಿಯಲ್ಲ. ಮೈಸೂರಿನ ಅರಮನೆ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಈ ಬಾರಿ ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಕೊರೋನಾ ಕಾರಣದಿಂದ ನಗರದ ವಿವಿಧ ವೇದಿಕೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸುವುದು ಅದು ವೃತ್ತಿ ಕಲಾವಿದರ ಬದುಕಿನ ಮೇಲೆ ಬರೆ ಎಳೆದಂತಾಗಲಿದೆ. ಸರ್ಕಾರದ ಈ ನಿಲುವು ಖಂಡನೀಯ. ವೃತ್ತಿ ಕಲಾವಿದರ ಹಿತಾಸಕ್ತಿಗೆ ವಿರುದ್ಧವಾದದ್ದು. ಕೋವಿಡ್-19 ಸಂಕಷ್ಟದಲ್ಲಿ ವೃತ್ತಿ ಕಲಾವಿದರ ಬದುಕಿನ ದುಸ್ಥಿತಿಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಪ್ರತಿವರ್ಷದಂತೆ ಈ ಬಾರಿಯೂ ಕೂಡ ಏಳು ಸಭಾಂಗಣದಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಾವುದೇ ಕಾರಣಕ್ಕೂ ರದ್ದುಪಡಿಸದೆ ಮುಂದುವರಿಸುವ ಮೂಲಕ ವೃತ್ತಿ ಕಲಾವಿದರ ಬದುಕಿನ ದುಸ್ಥಿತಿಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಪ್ರತಿವರ್ಷದಂತೆ ಈ ಬಾರಿಯೂ ಕೂಡ ಏಳು ಸಭಾಂಗಣದಲ್ಲಿನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಾವುದೇ ಕಾರಣಕ್ಕೂ ರದ್ದುಪಡಿಸದೆ ಒತ್ತಾಯಿಸಿದರು.