ದಸರಾ ಆಚರಣೆ ನಾಳೆ ಸಿಎಂ ಸಭೆ

ಬೆಂಗಳೂರು, ಸೆ. ೭- ನಾಡಹಬ್ಬ ಮೈಸೂರು ದಸರಾ ಆಚರಣೆ ಸಂಬಂಧ ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾಳೆ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ.
ಕೊರೊನಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಾಡಹಬ್ಬ ದಸರಾವನ್ನು ಅದ್ದೂರಿಯನ್ನಾಗಿ ಆಚರಿಸಬೇಕೆ, ಸರಳವಾಗಿ ಆಚರಿಸಬೇಕೆ, ಜಂಬೂಸವಾರಿಯನ್ನು ನಡೆಸಬೇಕೆ, ಬೇಡವೇ ಎಂಬೆಲ್ಲದರ ಬಗ್ಗೆಯೂ ನಾಳೆ ನಡೆಯುವ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಾಗುತ್ತದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಈ ಉನ್ನತ ಮಟ್ಟದ ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸೇರಿದಂತೆ, ಮೈಸೂರು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಈ ಸಭೆಯಲ್ಲಿ ದಸರಾ ಸರಳವಾಗಿರಬೇಕೆ, ಇಲ್ಲವೆ ಮಾಮೂಲಿನಂತೆ ಅದ್ದೂರಿಯಾಗಿ ದಸರಾ ನಡೆಸುವುದೇ, ಕೊರೊನಾ ಹಿನ್ನೆಲೆಯಲ್ಲಿ ಜಂಬೂಸವಾರಿ ಮೆರವಣಿಗೆ ಮಾಡಬೇಕೆ, ಬೇಡವೆ, ಎಂಬೆಲ್ಲಾ ಬಗ್ಗೆ ತೀರ್ಮಾನಗಳು ಆಗಲಿವೆ.
ಕೊರೊನಾ ಸೋಂಕಿನ ಪರಿಸ್ಥಿತಿಯಲ್ಲಿ ದಸರಾ ಹಬ್ಬ ಸರಳ ಆಚರಣೆಗೆ ಸೀಮಿತವಾಗುವ ಸಾಧ್ಯತೆಗಳಿದ್ದು, ಜಿಲ್ಲೆಯ ಜನ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಲಿಸಿದ ನಂತರವೇ ದಸರಾ ಆಚರಣೆಯ ಸ್ವರೂಪಗಳು ತೀರ್ಮಾನವಾಗಲಿವೆ.