ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕವಲ್ಲ:ಸಿಎಂ

(ಸಂಜೆವಾಣಿ ಪ್ರತಿನಿಧಿಯಿಂದ)
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಇಂದು ಬೆಳಿಗ್ಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮಂಡ್ಯದ ಅಮರಾವತಿ ಹೋಟೆಲ್ ಸಮೀಪದ ಗಣಂಗೂರು ಟೋಲ್ ಪ್ಲಾಜಾ ಬಳಿ ಪರಿಶೀಲಿಸಿ ಅಪಘಾತ ತಡೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದರು. ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ರವಿಕುಮಾರ್ ಗೌಡ, ರವೀಂದ್ರಸ್ವಾಮಿ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

ಬೆಂಗಳೂರು,ಜು.೨೯:ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಅಲ್ಲ, ಸುರಕ್ಷತಾ ದೃಷ್ಟಿಯಿಂದ ಕೆಲವೊಂದು ಕ್ರಮಗಳು ಹಾಗೂ ಸೌಲಭ್ಯಗಳು ಆಗಬೇಕಾಗಿದೆ. ಅದಕ್ಕಾಗಿ ಕೇಂದ್ರದ ಹೆದ್ದಾರಿ ಸಚಿವರಿಗೆ ೧೫೮.೮೧ ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಹೆಚ್ಚುವರಿ ಕಾಮಗಾರಿಗಳು ನವೆಂಬರ್ ನಂತರ ಪ್ರಾರಂಭವಾಗಲಿದೆ ಎಂದ ಅವರು, ಬಿಡದಿ, ರಾಮನಗರ, ಚನ್ನಪಟ್ಟಣ,ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ಬೈಪಾಸ್ ರಸ್ತೆಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಪ್ರವೇಶ ಮತ್ತು ನಿರ್ಗಮನ ರಸ್ತೆಯನ್ನು ಮಾರ್ಚ್ ಒಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರು-ಮೈಸೂರು ದಶಪಥ ಎಕ್ಸ್‌ಪ್ರಸ್ ಹೈವೆಯನ್ನು ಪರಿಶೀಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕಳೆದ ಕೆಲ ತಿಂಗಳಿನಿಂದ ಅಪಘಾತಗಳು ಹೆಚ್ಚಾಗಿದ್ದವು. ಕೆಲವೊಂದು ಸುರಕ್ಷತಾ ಕ್ರಮವನ್ನು ಕೈಗೊಂಡ ಕಾರಣ ಈ ತಿಂಗಳು ಜುಲೈನಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಈ ಸಂಬಂಧ ನಾನು ಈಗಾಗಲೇ ಸಭೆಗಳನ್ನು ನಡೆಸಿದ್ದೇನೆ. ಇನ್ನು ಒಂದು ಸಭೆಯನ್ನು ನಡೆಸಿ ಅಪಘಾತಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಈ ಹೆದ್ದಾರಿ ಅವೈಜ್ಞಾನಿಕ ಎಂದು ಕೆಲ ನಾಯಕರುಗಳು ಹೇಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಅವೈಜ್ಷಾನಿಕ ಅಲ್ಲ, ಕೆಲವೊಂದು ಸೌಲಭ್ಯಗಳು ಆಗಬೇಕಾಗಿವೆ ಎಂದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರಸ್ ರೈಲ್ವೆಯ ಸರ್ವೀಸ್ ರಸ್ತೆ ಕಾಮಗಾರಿಯ ಪೂರ್ಣಗೊಳಿಸಲು ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. ಅಗತ್ಯ ಬಿದ್ದರೆ ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ ಎಂದರು.
ಈ ಎಕ್ಸ್‌ಪ್ರಸ್ ವೇನಲ್ಲಿ ಸ್ಪೀಡ್ ಡಿಟೆಕ್ಟರ್ ಅಳವಡಿಸಿರಲಿಲ್ಲ ಹಾಗಾಗಿ ಅಪಘಾತ ಹೆಚ್ಚಾಗಿದ್ದವು. ಈಗ ಸ್ಪೀಡ್ ಡಿಟೆಕ್ಟರ್‌ನ್ನು ಅಳವಡಿಸಲಾಗಿದೆ ಎಂದರು.
ಹೆದ್ದಾರಿ ಪೂರ್ಣಗೊಳ್ಳದೆ ಟೋಲ್ ಸಂಗ್ರಹ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಹೆದ್ದಾರಿ ಸಚಿವರ ಜತೆ ಮಾತನಾಡುವ ಭರವಸೆ ನೀಡಿದರು.
ಉಡುಪಿ ಪ್ರಕರಣ ಕಾನೂನು ಕ್ರಮ
ಉಡುಪಿ ವೀಡಿಯೊ ಪ್ರಕರಣ ಬಗ್ಗೆ ಎಫ್‌ಐಆರ್ ದಾಖಲಾಗಿದೆ. ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.
ಸ್ಪೀಡ್ ಡಿಟೆಕ್ಟರ್‌ಗೆ ಚಾಲನೆ
ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಪಘಾತ ತಡೆಗಾಗಿ ಉಮ್ಮಳ ಹಳ್ಳಿ ಗೇಟ್ ಬಳಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸ್ಪೀಡ್ ಸ್ಪೀಡ್ ಡಿಟೆಕ್ಟರ್‌ಗೂ ಚಾಲನೆ ನೀಡಿದರು. ಸ್ಪೀಡ್ ಡಿಟೆಕ್ಟರ್ ಕೃತಕ ಬುದ್ಧಿ ಮತ್ತೆ ಎಐ ತಂತ್ರಜ್ಞಾನವನ್ನು ಒಳಗೊಂಡಿದ್ದು, ವೇಗವಾಗಿ ಚಲಿಸುವ ವಾಹನಗಳನ್ನು ಪತ್ತೆ ಹಚ್ಚಲಿದೆ.
ಈ ಸಂದರ್ಭದಲ್ಲಿ ಸಚಿವರಾದ ಚಲುವರಾಜಸ್ವಾಮಿ, ಶಾಸಕರಾದ ರವಿಕುಮಾರ್ ಗೌಡ, ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ಮತ್ತಿತರರು ಉಪಸ್ಥಿತರಿದ್ದರು.