ದಶಪಥ ಸ್ಥಳೀಯರಿಗೆ ಉಪಯೋಗವಿಲ್ಲ: ಹೆಚ್‌ಡಿಕೆ

ಬೆಂಗಳೂರು,ಮಾ.೧೨:ಬೆಂಗಳೂರು-ಮೈಸೂರು ದಶಪಥ ರಸ್ತೆಯಿಂದ ಈ ಹೆದ್ದಾರಿಯುದ್ದಕ್ಕೂ ಜೀವಿಸುತ್ತಿರುವ ಜನರಿಗೆ ನಯಾಪೈಸೆ ಉಪಯೋಗ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಸ್ಥಳೀಯರಿಗೆ ದಶಪಥ ರಸ್ತೆಯಿಂದ ಉಪಯೋಗ ಇದೆಯೇ ಎಂದು ಒಳಹೊಕ್ಕು ಲೆಕ್ಕ ಹಾಕಿದರೆ ಉತ್ತರ ದೊಡ್ಡ ಸೊನ್ನೆ. ಕೇವಲ ಬೆಂಗಳೂರಿನಿಂದ ಮೈಸೂರಿಗೆ ಶರವೇಗದಲ್ಲಿ ನೇರವಾಗಿ ಸಂಚರಿಸುವವರಿಗಷ್ಟೇ ಇದರ ಲಾಭ ಸಿಗುತ್ತದೆ. ರಾಮನಗರ, ಚೆನ್ನಪಟ್ಟಣ, ಮದ್ದೂರುಗಳಿಗೆ ಎಳ್ಳಷ್ಟೂ ಉಪಯೋಗವಿಲ್ಲ. ಸತ್ಯವನ್ನು ನಾವೆಲ್ಲರೂ ಅರಿಯಬೇಕು ಎಂದವರು ಸರಣಿ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಕೆಲವರ ಪಾಲಿಗೆ ದೊಡ್ಡ ಎಟಿಎಂ ಆಗಿಬಿಟ್ಟ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಅಸಲಿ ಅಂಶಗಳನ್ನು ಪಟ್ಟಿ ಮಾಡಿದರೆ ಕನ್ನಡಿಗರಿಗೆ ನಿರಾಶೆ, ನೋವು, ಹತಾಶೆ ಖಂಡಿತ.
ಈ ದಶಪಥ ಹೆದ್ದಾರಿಯ ಮಾರಣಾಂತಿಕ ಹೊಡೆತ ಮೊದಲು ಬಿದ್ದಿರುವುದು ಮಂಡ್ಯ ಜಿಲ್ಲೆ ಜನರಿಗೆ, ಆರ್ಥಿಕ, ಸಾಮಾಜಿಕ ಜಿಲ್ಲೆಯನ್ನು ಮುಗಿಸುವುದೇ ದಶಪಥ ಹೆದ್ದಾರಿಯ ದುರುದ್ದೇಶವಾ? ಜಿಲ್ಲೆಯ ಆರ್ಥಿಕ ಸರಪಳಿಗೆ ಕುಣಿಕೆ ಬಿಗಿಯುವುದೇ ಇದರ ಒಳ ಉದ್ದೇಶವಾ? ಎಂಬುದು ನನ್ನ ಅನುಮಾನ ಎಂದವರು ಟ್ವೀಟ್ ಮಾಡಿದ್ದಾರೆ,
ಈ ಹೆದ್ದಾರಿಯಿಂದ ಹೋಟೆಲ್,ಸಣ್ಣ-ಅತಿ ಸಣ್ಣ, ಕಬ್ಬು-ಬೆಲ್ಲ, ಪೆಟ್ರೋಲ್ ಬಂಕ್ ಸೇರಿ ಅಗತ್ಯ ವಸ್ತುಗಳ ಸುಮಾರು ೨,೬೦೦ಕ್ಕೂ ಹೆಚ್ಚು ಸ್ಥಳೀಯ ಉದ್ಯಮ ನೆಲ ಕಚ್ಚಿದೆ. ಎಳನೀರು ವ್ಯಾಪಾರಕ್ಕೂ ಎಳ್ಳು-ನೀರು ಬಿಡಲಾಗಿದೆ. ಜನರ ಬದುಕು ಕಸಿದುಕೊಂಡ ದಶಪಥ ಲೋಕಾರ್ಪಣೆಗೆ ಬರುತ್ತಿರುವ ಪ್ರಧಾನಿ ಮೋದಿ ಅವರ ವಿರುದ್ಧ ಜನರ ಆಕ್ರೋಶ ಸ್ಫೋಟಗೊಂಡಿದೆ. ಕಪ್ಪು ಪಟ್ಟಿ ಪ್ರದರ್ಶನ ಮಾಡಲು ಹೊರಟಿದ್ದಾರೆ. ಅದು ಬೇಡ ಎಂದು ವಿನಂತಿಸುತ್ತೇನೆ. ನ್ಯಾಯ ಕೇಳೋಣ, ಹಕ್ಕು ಪ್ರತಿಪಾದಿಸೋಣ, ಅವರಿಗೆ ಅಗೌರವ ತೋರಿಸುವುದ ಬೇಡ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ದಶಪಥ ರಸ್ತೆಯಿಂದ ಬದುಕು ಕಳೆದುಕೊಂಡಿರುವವರ ಜೀವನೋಪಾಯಕ್ಕೆ ಪರ್ಯಾಯ ದಾರಿಯನ್ನು ಪ್ರಧಾನಿಗಳು ತೋರಬೇಕು ಎಂದು ಅವರು ಒತ್ತಾಯಿಸಿ ೩೦ ವರ್ಷಗಳ ಕಾಲ ಈ ಹೆದ್ದಾರಿಯಲ್ಲಿ ಸಂಚರಿಸುವ ಜನ ಟೋಲ್ ಕಟ್ಟುತ್ತಾರೆ ಸಂಗ್ರಹವಾಗುವ ಶುಲ್ಕದ ಮೂಲಕವೇ ರಸ್ತೆ ನಿರ್ಮಾಣದ ಖರ್ಚನ್ನು ಜನರೇ ಭರಿಸುತ್ತಾರೆ. ಮುತ್ತಿಗೆದಾರರ ಜೇಬಿಗೆ ಬಹು ದೊಡ್ಡ ಗಂಟು ಸೇರಲಿದೆ. ಕೇಂದ್ರ ಬಿಜೆಪಿ ಸರ್ಕಾರದಿಂದ ಈ ಯೋಜನೆಗೆ ಬಿಡಿಗಾಸು ಬಂದಿಲ್ಲ, ಸತ್ಯವನ್ನು ಮರೆಮಾಚಿ, ರಸ್ತೆ ನಿರ್ಮಾಣಕ್ಕೆ ಬಿಜೆಪಿಗರು ತಾವೇ ಕಾರಣ ಎಂದು ರಣರಣ ಬೊಬ್ಬೆ ಹೊಡಿಯುತ್ತಿರುವ ದಶಪಥ ಹೆದ್ದಾರಿ ಹೆಸರಿನಲ್ಲಿ ಮಾಡುತ್ತಿರುವ ಮಹಾದ್ರೋಹ ಎಂದು ಟೀಕಿಸಿದ್ದಾರೆ.