ದಶಕದಲ್ಲೇ ‘ಮಾದರಿ’ಯಾದ ಹಲಬರ್ಗಾ ಮಠ

ಬೀದರ್:ಜ.10: ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠ ದಶಕದಲ್ಲೇ ‘ಮಾದರಿ ಮಠ’ವಾಗಿ ಮಾರ್ಪಟ್ಟಿದೆ.

ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರ ಸಂಕಲ್ಪದ ಫಲವಾಗಿ ಮಠದ ಚಿತ್ರಣ ಸಂಪೂರ್ಣ ಬದಲಾಗಿದೆ.

ದಶಕದ ಹಿಂದೆ 100*100 ಅಡಿಯಲ್ಲಿ ಇದ್ದ ಮಠ ಈಗ ಎರಡೂವರೆ ಎಕರೆಯಷ್ಟು ಪ್ರದೇಶದಲ್ಲಿ ವಿಸ್ತಾರಗೊಂಡಿದೆ. ನೆಲಮಹಡಿಯಲ್ಲಿ ಸುಸಜ್ಜಿತ ಸಭಾ ಭವನ, ಶ್ರೀಗಳ ವಿಶ್ರಾಂತಿ ಗೃಹ, ಪ್ರಸಾದ ಕೋಣೆಗಳು ನಿರ್ಮಾಣಗೊಂಡಿವೆ. ಮೊದಲ ಮಹಡಿಯಲ್ಲಿ ವಿಶಾಲ ಕಲ್ಯಾಣ ಮಂಟಪ ಕೂಡ ತಲೆ ಎತ್ತಿದೆ.

ರಾಚೋಟೇಶ್ವರ ಕತರ್ುೃ ಗದ್ದುಗೆ ಜೀರ್ಣೋದ್ಧಾರಗೊಂಡಿದೆ. ರಾಚೋಟೇಶ್ವರರ ಅಮೃತ ಶಿಲೆಯ ನಯನ ಮನೋಹರ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಬರಗಾಲದ ವೇಳೆ ಮಠದ ಎರಡನೇ ಪೀಠಾಧಿಪತಿ ಸಿದ್ಧರಾಮೇಶ್ವರರು ತಮ್ಮ ಕೈಯಾರೆ ತೋಡಿದ ಬಾವಿಯನ್ನು ಸಂರಕ್ಷಿಸಲಾಗಿದೆ. ಅಷ್ಟು ಮಾತ್ರವಲ್ಲ; ಅದಕ್ಕೆ ಪ್ರತಿ ವರ್ಷ ಗಂಗಾ ಪೂಜೆಯೂ ನೆರವೇರುತ್ತಿದೆ. ಮಠದಲ್ಲಿ ಮಾಸಿಕ ಚಿಂತನ ಗೋಷ್ಠಿ, ಮಹಾ ಪುರುಷರ ಜಯಂತಿಗಳು, 11 ದಿನಗಳ ವಾರ್ಷಿಕ ಜಾತ್ರೆ ಭಕ್ತರ ಸಮಾಗಮಕ್ಕೆ ವೇದಿಕೆ ಕಲ್ಪಿಸುತ್ತಿವೆ.

10 ವರ್ಷಗಳ ಹಿಂದೆ ಮಠ ಕಿರಿದಾಗಿತ್ತು. ಹಾವಗಿಲಿಂಗೇಶ್ವರ ಶಿವಾಚಾರ್ಯರು ಪೀಠಾಧ್ಯಕ್ಷರಾದ ನಂತರ, ಅವರ ಪರಿಶ್ರಮದಿಂದಾಗಿ ಅಲ್ಪ ಅವಧಿಯಲ್ಲೇ ಸಾಕಷ್ಟು ಅಭಿವೃದ್ಧಿ ಕಂಡಿದೆ. ಸುತ್ತಮುತ್ತಲ ಗ್ರಾಮಗಳಲ್ಲೇ ದೊಡ್ಡ ಮಠವಾಗಿ ಗುರುತಿಸಿಕೊಂಡಿದೆ. ಎಲ್ಲರ ಗಮನ ಸೆಳೆಯುತ್ತಿದೆ ಎಂದು ಹೇಳುತ್ತಾರೆ ಗ್ರಾಮದ ನಿವೃತ್ತ ಶಿಕ್ಷಕ ರೇವಣಪ್ಪ ಮೂಲಗೆ.

ರಾಚೋಟೇಶ್ವರರು ಜೀವಂತ ಸಮಾಧಿ ಪಡೆದ ಮಠ ಇದು. ಮಠಕ್ಕೆ ಐನೂರು ವರ್ಷಗಳ ಇತಿಹಾಸ ಇದೆ. ಸರ್ವ ಭಕ್ತರ ಸಹಕಾರದಿಂದಾಗಿ ಮಠದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ನುಡಿಯುತ್ತಾರೆ.

ಮಠದಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಆಧ್ಯಾತ್ಮಿಕ ಕಾರ್ಯಕ್ರಮಗಳು ಇಂದಿನ ಒತ್ತಡದ ದಿನಗಳಲ್ಲಿ ಭಕ್ತರಿಗೆ ಮಾನಸಿಕ ಶಾಂತಿ, ಸಮಾಧಾನ ಹಾಗೂ ನೆಮ್ಮದಿ ಕೊಡುತ್ತಿವೆ. ಬಹಳಷ್ಟು ಜನರ ಮನಃ ಪರಿವರ್ತನೆಗೂ ಕಾರಣವಾಗಿವೆ. ಇದೇ ಕಾರಣಕ್ಕಾಗಿ ಮಠದ ಆಧ್ಯಾತ್ಮಿಕ ಕಾರ್ಯಕ್ರಮ ಹಾಗೂ ಜಾತ್ರೆಗೆ ಭಕ್ತರು ಸ್ವಯಂ ಪ್ರೇರಣೆಯಿಂದ ತನು, ಮನ, ಧನದಿಂದ ಸಹಕಾರ ನೀಡುತ್ತಾರೆ. ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಣೆ ಮಾಡುತ್ತಾರೆ ಎಂದು ಹೇಳುತ್ತಾರೆ.


ಮಠದ ನಾಲ್ಕನೇ ಪೀಠಾಧಿಪತಿ

ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಠದ ನಾಲ್ಕನೇ ಪೀಠಾಧಿಪತಿಯಾಗಿದ್ದಾರೆ.

ಸುಮಾರು ಐನೂರು ವರ್ಷಗಳ ಹಿಂದೆ ಮಠವನ್ನು ಸ್ಥಾಪಿಸಿ, ಮೊದಲ ಪೀಠಾಧ್ಯಕ್ಷರಾದವರು ರಾಚೋಟೇಶ್ವರ ಶಿವಯೋಗಿಗಳು.

ಅವರು ಮಠಕ್ಕೆ ಬಂದ ಭಕ್ತರ ಸಂಕಷ್ಟ ಪರಿಹರಿಸಿ ಕಳುಹಿಸುತ್ತಿದ್ದರು. ಮಳೆ ಬಾರದಿದ್ದಾಗ ಅನುಷ್ಠಾನದ ಮೂಲಕ ವರುಣನ ಕೃಪೆ ಆಗುವಂತೆ ಮಾಡುತ್ತಿದ್ದರು. ಅಂಧಶ್ರದ್ಧೆಯನ್ನು ದೂರ ಮಾಡಿ, ಭಕ್ತರಿಗೆ ಸುಜ್ಞಾನದ ಬೆಳಕು ತೋರುತ್ತಿದ್ದರು.

ಎರಡನೇ ಪೀಠಾಧಿಪತಿಯಾಗಿದ್ದ ಸಿದ್ಧರಾಮೇಶ್ವರರು ಬರಗಾಲದಿಂದಾಗಿ ಗ್ರಾಮದಲ್ಲಿ ನೀರಿಗೆ ಹಾಹಾಕಾರ ಉಂಟಾದಾಗ, ತಮ್ಮ ಕೈಯಾರೆ ಬಾವಿ ತೋಡಿ, ಜನರ ಬಾಯಾರಿಕೆ ನೀಗಿಸಿದ್ದರು. ಆ ಬಾವಿಯಲ್ಲಿ ನೀರಿನ ಸೆಲೆ ಇಂದಿಗೂ ಬತ್ತಿಲ್ಲ.

ನಂತರ ಬಂದವರು ಕರಿಬಸವೇಶ್ವರ ಶಿವಯೋಗಿಗಳು. ಹಾಲಿ ಪೀಠಾಧ್ಯಕ್ಷ ಹಾವಗಿಲಿಂಗೇಶ್ವರ ಶಿವಾಚಾರ್ಯರೂ ತಮ್ಮ ಗುರುಗಳ ಮಾರ್ಗದಲ್ಲೇ ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.