ದಶಕದಲ್ಲಿ ಗಣಿನಾಡಿನ ಐವರು ಸಚಿವರ ತಲೆದಂಡ


* ಅಕ್ರಮ, ಭ್ರಷ್ಟಾಚಾರದ  ಆರೋಪ
* ಜನಾರ್ಧನರೆಡ್ಡಿ, ರಾಮುಲು, ಲಾಡ್‍, ಪಿಟಿಪಿ ಇದೀಗ ನಾಗೇಂದ್ರ ರಾಜೀನಾಮೆ
ಎನ್‌.ವೀರಭದ್ರಗೌಡ
ಬಳ್ಳಾರಿ, ಜೂ.08: ಗಣಿನಾಡು  ಬಳ್ಳಾರಿ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಅನೇಕ ಸಚಿವರು ರಾಜೀನಾಮೆ ನೀಡಿದ್ದಾರೆ. ಕೆಲವರು ಸ್ವತಃ ರಾಜೀನಾಮೆ ನೀಡಿದರೆ. ಮತ್ತೆ ಕೆಲವರು ಅಕ್ರಮ, ಭ್ರಷ್ಟಾಚಾರದ ಆರೋಪ ಹೊತ್ತು ರಾಜೀನಾಮೆ ನೀಡಿದ ಇತಿಹಾಸವಿದೆ.
ಸಂಡೂರಿನ ಶಾಸಕರಾಗಿ,  ವೀರಪ್ಪ ಮೊಯ್ಲಿಯವರ ಸಂಪುಟದಲ್ಲಿ ಪಂಚಾಯತ್ ರಾಜ್ ಸಚಿವರಾಗಿದ್ದ ಎಂ.ವೈ.ಘೋರ್ಪಣೆ ಅವರು  ಪಂಚಾಯತ್ ಸಂಸ್ಥೆಗಳ ಚುನಾವಣೆಯನ್ನು ನಿಗಧಿತ ಅವಧಿಯಲ್ಲಿ ನಡೆಸಲಿದೆಂದು ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ವರದಿಗಾರರಿಗೆ ಹೇಳಿದ್ದರು. ಆಗ ನಡೆಸದಿದ್ದರೆ ಏನ್ ಮಾಡ್ತೀರಿ ಎಂಬ ಪ್ರಶ್ನೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ ಎಂದಿದ್ದರು. ಅದನ್ನು ಮಾಧ್ಯಮಗಳು ಪ್ರಕಟಿಸಿದ್ದವು.
ಆದರೆ ಸಚಿವರು ಹೇಳಿದಂತೆ ನಿಗಧಿತ ಅವಧಿಗೆ ಪಂಚಾಯತ್ ಚುನಾವಣೆಗಳನ್ನು ಸರಕಾರ ನಿಗಧಿತ ಸಮಯಕ್ಕೆ ನಡೆಸಲಿಲ್ಲ. ತತ್ವ ಸಿದ್ದಾಂತಗಳಿಗೆ ಬದ್ಧರಾಗಿದ್ದ ಘೋರ್ಪಡೆಯವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಿಂದಕ್ಕೆ ಪಡೆದುಕೊಳ್ಳಿ ಎಂದು ಯಾರೇ ಹೇಳಿದರೂ ಅವರು ಮಣಿಯಲಿಲ್ಲ.
ಜಿಲ್ಲೆಯಲ್ಲಿ ಇದು ಒಂದು ಕಡೆಯದಾರೆ. ಕಳೆದ ಒಂದು ದಶಕದಲ್ಲಿ ಅಕ್ರಮ, ಭ್ರಷ್ಟಾಚಾರಕ್ಕಾಗಿ ಐದು ಜನ ಸಚಿವರ ತಲೆದಂಡವಾಗಿದೆ. ಸಧ್ಯ ಗಂಗಾವತಿ ಶಾಸಕರಾಗಿರುವ ಜಿ.ಜನಾರ್ಧನರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು, ಧಾರವಾಡ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್  ಇದೀಗ ಬಿ.ನಾಗೇಂದ್ರ ಈ ಸಾಲಿಗೆ ಸೇರಿದ್ದಾರೆ.
ಅಕ್ರಮ ಗಣಿಗಾರಿಕೆ ಆರೋಪ:
ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿದ್ದಾಗ  2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮುಗಿಲು ಮುಟ್ಟಿತ್ತು. ಹಾಲಿ ಸಿಎಂ ಸಿದ್ದರಾಮಯ್ಯ
ಮತ್ತು ತಂಡ ತನಿಖೆಗಾಗಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದರು.
ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಜಿಂದಾಲ್ ಅಂಗ ಸಂಸ್ಥೆಯಿಂದ ತಮ್ಮ ಶಿವಮೊಗ್ಗ  ಶಿಕ್ಷಣ ಸಂಸ್ಥೆಗೆ  ಚೆಕ್ ಮೂಲಕ  ಲಂಚ ಪಡೆದರು ಎಂಬ ಆರೋಪದಡಿ ಲೋಕಾಯುಕ್ತರಿಂದ ಬಂಧನವಾದರು.
ಜನಾರ್ಧನರೆಡ್ಡಿ, ಶ್ರೀರಾಮುಲು, ಕರುಣಾಕರ ರೆಡ್ಡಿ ಸಚಿವ ಸ್ಥಾನ ಕಳೆದುಕೊಂಡರು. ನಂತರ ಸದಾನಂದಗೌಡರ ಸರ್ಕಾರದಲ್ಲಿ ಅಕ್ರಮ ಗಣಿಗೆ ಆರೋಪದಿಂದ  ಇವರಿಗೆ ಸಚಿವ ಸ್ಥಾನ ನೀಡಲಿಲ್ಲ ಜೊತೆಗೆ ಲೋಕಯುಕ್ತ ತನಿಖಾ ವರದಿಯಲ್ಲಿ ನ್ಯಾ. ಸಂತೋಷ್ ಹೆಗಡೆ ಅವರು ಅಕ್ರಮ ಗಣಿಗಾರಿಕೆ ಆರೋಪ ಮಾಡಿದ್ದರಿಂದ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆಂದು ಶ್ರೀರಾಮುಲು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು‌. ಮರುದಿನ 2011 ರ ಸೆ.5 ರಮನದು ಜನಾರ್ಧನರೆಡ್ಡಿ ಅವರು ಸಿಬಿಐ ಬಂಧನಕ್ಕೊಳಗಾದರು.
ಲಾಡ್ ರಾಜೀನಾಮೆ;
ರಾಜ್ಯದಲ್ಲಿ 2013ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ, ಮೊದಲ ಅವಧಿಯಲ್ಲೇ ಧಾರವಾಡದ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ  ಸಂತೋಷ್ ಎಸ್.ಲಾಡ್‍ ಅವರಿಗರ  ವಾರ್ತಾ ಮತ್ತು ಪ್ರಸಾರ  ಖಾತೆ ಸಚಿವ ಸ್ಥಾನ ನೀಡಿತ್ತು. ಆದರೆ, ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಗಳ ಬಳಿಕ ಇವರ ವಿರುದ್ಧ ಅಕ್ರಮ ಗಣಿಗಾರಿಕೆ, ಅರಣ್ಯ ನಾಶ  ಪ್ರಕರಣಕ್ಕೆ ಸಂಬಂಧಿಸಿದಂತೆ.  ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ ಆರೋಪಿಸಿದ ಹಿನ್ನೆಲೆಯಲ್ಲಿ ಸಂತೋಷ್ ಲಾಡ್ ಸಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯ್ತು,
ಅಕ್ರಮ ಮರಳು, ಮದ್ಯಕ್ಕೆ ಪಿಟಿಪಿ;
ಸಚಿವ ಸಂತೋಷ್ ಲಾಡ್ ಬಳಿಕ, 2013 ರ ಸಿದ್ದರಾಮಯ್ಯ ಸರ್ಕಾರದಲ್ಲಿ ಹಡಗಲಿ ಶಾಸಕರಾಗಿದ್ದ ಪಿ.ಟಿ.ಪರಮೇಶ್ವರ ನಾಯ್ಕ್ ಸಹ  ಕಾರ್ಮಿಕ ಸಚಿವರಾಗಿ ಜಿಲ್ಲಾ  ಉಸ್ತುವಾರಿ ಸಚಿವ ಸ್ಥಾನ ಒಲಿಯಿತು. ಆದರೆ, ಆಗ ಇವರ ವಿರುದ್ದವೂ ಹಲವು ಅಕ್ರಮಗಳ ಆರೋಪಗಳು ಕೇಳಿಬಂದವು. ಅಕ್ರಮ ಮರಳುಗಾರಿಕೆ, ಅಕ್ರಮ ಮದ್ಯ ಮಾರಾಟದ ಆರೋಪಕ್ಕೆ ಸಂಬಂಧಿಸಿದಂತೆ ಅಂದಿನ ಕೂಡ್ಲಿಗಿ ವಿಭಾಗದ ಡಿವೈಎಸ್‍ಪಿ ಆಗಿದ್ದ ಅನುಪಮಾ ಶಣೈ ಮತ್ತು ಅಂದಿನ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ನಡುವೆ ವಿವಾದ ಸೃಷ್ಟಿಯಾಯಿತು. ಪರಮೇಶ್ವರ
ನಾಯ್ಕ್ ಮಹಿಳಾ ಪೊಲೀಸ್ ಅಧಿಕಾರಿ ಬಗ್ಗೆ ಮೊಬೈಲ್‍ನಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ್ದ ಆಡಿಯೋ ಲೀಕ್ ಆಗಿ ಗೊಂದಲ ಸೃಷ್ಟಿಯಾಯಿತು. ಪರಿಣಾಮ, ದಿಢೀರನೆ, ಡಿವೈಎಸ್‍ಪಿ ಅನುಪಮಾ ಶಣೈರನ್ನು ವಿಜಯಪುರದ ಇಂಡಿಗೆ ವರ್ಗಾವಣೆ ಮಾಡಲಾಯಿತು.
ನಂತರ ನೋಡಿ‌ ನನ್ನ ಎದಿರು ಹಾಕಿಕೊಂಡರೆ ಏನಾಗುತ್ತೆ ಎಂದು ಪಿಟಿಪಿ ಬಹಿರಂಗವಾಗಿ ಭಾಷಣ ಮಾಡಿದ್ದರು. ಇದರಿಂದ ಕೆಲ  ಸಾಮಾಜಿಕ ಹೋರಾಟಗಾರಿಂದ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಪಿ.ಟಿ.ಪರಮೇಶ್ವರ ನಾಯ್ಕ್ ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
ಹಣ ದುರ್ಬಳಕೆ ನಾಗೇಂದ್ರ ರಾಜೀನಾಮೆ;
ಇದೀಗ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಪರಿಶಿಷ್ಟ ಪಂಗಡಗಳ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಸಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅಕ್ರಮ, ಭ್ರಷ್ಟಾಚಾರಕ್ಕೂ ಬೆಂಬಿಡದ ನಂಟಾಗಿ ಪರಿಣಮಿಸಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.