ದಶಕಗಳ ಕನಸು ನನಸು : ಮೋದಿ

ನವದೆಹಲಿ,ಸೆ.೨೨- ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾಗಿರುವುದು ನವ ಭಾರತ ನಿರ್ಮಾಣಕ್ಕೆ ಭದ್ರ ಬುನಾಯಾಗಿದೆ. ದಶಕಗಳಿಂದ ಕಾಯುತ್ತಿದ್ದ ಕನಸು ನನಸಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಅಥವಾ “ನಾರಿ ಶಕ್ತಿ ವಂದನ್ ಅಧಿನಿಯಮ ಸಾಮಾನ್ಯ ಕಾನೂನಲ್ಲ. ಬದಲಾಗಿ ನವ ಭಾರತದ ಪ್ರಜಾಸತ್ತಾತ್ಮಕ ಬದ್ಧತೆಯ ಘೋಷಣೆಯಾಗಿದೆ.ಜೊತೆಗೆ ಮಹಿಳಾ ಅಭಿವೃದ್ಧಿಗೆ ಭರವಸೆಯ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಸಂಸತ್ತು ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ ಅಂಗೀಕರಿಸಿದ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಹಿಳಾ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದಶಕಗಳಿಂದ ಕಾಯುತ್ತಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನೂ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ಮಾಡಿದ್ದೇವೆ. ಈ ಮೂಲಕ ಮಹಿಳೆಯರ ಮೇಲಿರುವ ಕಾಳಜಿ ಮತ್ತು ಬದ್ಧತೆ ಪ್ರದರ್ಶಿಸಿದ್ದೇವೆ ಎಂದಿದ್ದಾರೆ. ಭಾರತದ ಪ್ರತಿಯೊಬ್ಬ ತಾಯಿ, ಸಹೋದರಿ ಮತ್ತು ಮಗಳನ್ನು ಅಭಿನಂದಿಸಲು ಬಯಸುತ್ತೇನೆ, ಮಹಿಳಾ ಮೀಸಲಾತಿ ಮಸೂದೆ ಜಾರಿ ಮೂಲಕ ಇತಿಹಾಸ ನಿರ್ಮಿಸುವುದನ್ನು ನೋಡಿದ್ದೇವೆ ಎಂದಿದ್ದಾರೆ. ದೇಶದ ಪ್ರಜೆಗಳು ನಮಗೆ ಇತಿಹಾಸವನ್ನು ಸೃಷ್ಟಿಸುವ ಅವಕಾಶ ನೀಡಿರುವುದು ನಮ್ಮ ಅದೃಷ್ಟ. ನಿರ್ಧಾರವನ್ನು ಮುಂದಿನ ಪೀಳಿಗೆಗಳು ಆಚರಿಸುತ್ತವೆ. ನಾರಿ ಶಕ್ತಿ ವಂದನ್ ಅಧಿನಿಯಂ ಸಂಸತ್ತಿನಲ್ಲಿ ಬಹುಮತದೊಂದಿಗೆ ಅಂಗೀಕಾರಗೊಂಡಿದೆ ಎಂದು ಹೇಳಿದ್ದಾರೆ. ಮುಂದಿನ ಹಲವು ತಲೆಮಾರುಗಳವರೆಗೆ ಈ ನಿರ್ಧಾರವನ್ನು ಚರ್ಚಿಸಲಾಗುವುದು.ಕಳೆದ ಹಲವು ದಶಕಗಳಿಂದ ದೇಶ ಕಾಯುತ್ತಿದ್ದ ಕನಸು ಈಗ ನನಸಾಗಿದೆ ಎಂದು ಹೇಳಿದ್ದಾರೆ. ಮಸೂದೆಯನ್ನು ಬೆಂಬಲಿಸಿ ಮತ ಚಲಾಯಿಸಿದ ರಾಜಕೀಯ ಪಕ್ಷಗಳು ಮತ್ತು ಸಂಸತ್ತಿನ ಸದಸ್ಯರಿಗೆ ಧನ್ಯವಾದವನ್ನೂ ಅವರು ತಿಳಿಸಿದ ಅವರು ಪ್ರಯತ್ನಗಳಲ್ಲಿ ಪ್ರಾಮಾಣಿಕ ಉದ್ದೇಶಗಳು ಮತ್ತು ಪಾರದರ್ಶಕತೆ ಹೊಂದಿರುವಾಗ, ಸಮಸ್ಯೆಗಳನ್ನು ನಿವಾರಿಸಬಹುದು ಮತ್ತು ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಬಹುದು ಎಂದಿದ್ದಾರೆ. ಹೊಸ ಸಂಸತ್ತಿನಲ್ಲಿ ಕಾನೂನನ್ನು ಬಹುತೇಕ ಎಲ್ಲರೂ ಬೆಂಬಲಿಸಿದ ದಾಖಲೆಯಾಗಿದೆ. ಇದಕ್ಕಾಗಿ ನಾನು ಪ್ರತಿ ರಾಜಕೀಯ ಪಕ್ಷಗಳಿಗೆ ಮತ್ತು ಸಂಸತ್ತಿನ ಸದಸ್ಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಮಸೂದೆ ಸಂಸತ್ ಅಂಗೀಕಾರ ನೀಡಿದೆ.