ದವಸ-ಧಾನ್ಯಗಳ ಹಬ್ಬ ‘ಮಕರ ಸಂಕ್ರಾಂತಿ’

ಮೈಸೂರು:ಜ:14: ಹೊಸ ವರ್ಷದ ಪ್ರಥಮ ಹಬ್ಬ ಮಕರ ಸಂಕ್ರಾಂತಿಯನ್ನು ದೇಶದಾದ್ಯಂತ ಇಂದು ಆಚರಿಸಲಾಗುತ್ತಿದೆ. ಅದರಂತೆ ಸಾಂಸ್ಕøತಿಕ ನಗರಿ ಮೈಸೂರಿನಲ್ಲೂ ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ಕುಟುಂಬ ಸಮೇತರಾಗಿ ಸಡಗರದಿಂದ ಆಚರಿಸುತ್ತಿದ್ದಾರೆ.
ನಗರದೆಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮನೆಯಲ್ಲಿನ ಮಹಿಳೆಯರು ಮುಂಜಾನೆಯೇ ಎದ್ದು ತಮ್ಮ ಮನೆಯ ಮುಂಭಾಗವನ್ನು ತೊಳೆದು ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಿರುವ ದೃಶ್ಯ ಕಂಡುಬರುತ್ತಿತ್ತು. ಮನೆಯಲ್ಲಿನ ಸದಸ್ಯರು ಸ್ನಾನ ಮಾಡಿಕೊಂಡು ದೇವರಿಗೆ ಪೂಜೆ ಸಲ್ಲಿಸಿದ ನಂತರ ಸಮೀಪವಿರುವ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಮಾಡಿ ಮನೆಗೆ ಹಿಂದಿರುಗಿ ಬಂದು ಮನೆಯ ಹಿರಿಯರ ಪಾದಗಳಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದ ನಂತರ ಎಳ್ಳು-ಬೆಲ್ಲ ಮಿಶ್ರಣವನ್ನ ತಿಂದ ನಂತರ ಉಪಹಾರ ಮಾಡುವ ಸಂಪ್ರದಾಯ ನಮ್ಮಲ್ಲಿ ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ಹಬ್ಬದ ಅಂಗವಾಗಿ ನಗರ್ ವಿವಿಧ ಬಡಾವಣೆಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ದೇವರಿಗೆ ಮಹಾ ಮಂಗಳಾರತಿ ಆದ ನಂತರ ಭಕ್ತಾಧಿಗಳಿಗೆ ಸಿಹಿ, ಖಾರ, ಪೊಂಗಲ್ ವಿತರಿಸಲಾಯಿತು.
ಇನ್ನು ಮನೆಯಲ್ಲಿನ ಹೆಣ್ಣು ಮಕ್ಕಳು ಇಂದು ಹೊಸ ಬಟ್ಟೆ, ಕೈಬಳೆ, ಗೆಜ್ಜೆ ಹಾಗೂ ಅಲಂಕಾರ ಮಾಡಿಕೊಂಡು ಚಿನ್ನದ ಒಡವೆಗಳನ್ನು ಧರಿಸಿಕೊಂಡು ತಮ್ಮ ಸಂಬಂಧಿಕರ, ಗೆಳೆಯರ ಹಾಗೂ ಆತ್ಮೀಯರ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲ ಮಿಶ್ರಣವನ್ನು ಕೊಟ್ಟು ಪರಸ್ಪರ ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇಂದು 10-12 ವರ್ಷದೊಳಗಿನ ಹೆಣ್ಣು ಮಕ್ಕಳನ್ನು ನೋಡುವುದೇ ಒಂದು ಆನಂದ. ಸಂಜೆ ಗೋಪಾಲಕರು ತಾವು ಸಾಕುತ್ತಿರುವ ರಾಸುಗಳನ್ನು ಕಿಚ್ಚು ಹಾಯಿಸುವರು.
ಮತ್ತೊಂದೆಡೆ ಗ್ರಾಮಾಂತರ ಪ್ರದೇಶಗಳಲ್ಲಿನ ಜನತೆ ಈ ಹಬ್ಬವನ್ನು ಬಹಳ ಸಡಗರದಿಂದ ಆಚರಿಸುತ್ತಾರೆ. ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಭತ್ತ ಹಾಗೂ ಇನ್ನಿತರ ಬೆಳೆಗಳನ್ನು ಕಣಜದಲ್ಲಿ ರಾಶಿ ಹಾಕಿ ಅದಕ್ಕೆ ಪೂಜೆ ಸಲ್ಲಿಸುತ್ತಾರೆ. ಮಲೆನಾಡು-ಅರೆಮನೆ ನಾಡು ಪ್ರದೇಶಗಳಲ್ಲಿ ಈ ಹಬ್ಬಕ್ಕೆ ವಿಶೇಷ ಕಳೆ ಇರುತ್ತದೆ. ರಾತ್ರಿ ಇಡೀ ಕಣಜದ ಮುಂದೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಸಹ ನಡೆಸಲಾಗುತ್ತದೆ.
ಸೂರ್ಯ ಪಥ ಬದಲಾವಣೆ:
ಮಕರ ಸಂಕ್ರಾಂತಿಯ ದಿನವಾದ ಇಂದು ಸೂರ್ಯನಾರಾಯಣನು ತನ್ನ ಪಥವನ್ನು ಬದಲಿಸಿ ದಕ್ಷಿಣದಿಂದ ಉತ್ತರದ ಕಡೆಗೆ ಚಲಿಸಲು ಆರಂಭಿಸುತ್ತಾನೆ. ಹಾಗಾಗಿ ಇಂದಿನಿಂದ ಉತ್ತರಾಯನ ಪುಣ್ಯಕಾಲ ಆರಂಭಗೊಳ್ಳುತ್ತಿದೆ.