ದಲ್ಲಾಳಿಗಳ ಹಾವಳಿ ತಪ್ಪಿಸಲು ಮನವಿ


ನವಲಗುಂದ,ಮೇ.25: ರೈತರು ತಮ್ಮ ದನಕರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಂದರ್ಭದಲ್ಲಿ ಕಟಗರ, ದಲ್ಲಾಳಿಗಳ ಹಾವಳಿ ತಪ್ಪಿಸುವ ಮೂಲಕ ರೈತರ ದನಕರುಗಳಿಗೆ ಉತ್ತಮ ಬೆಲೆ ದೊರಕುವಂತೆ ಮಾಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಇಲಾಖೆಯ ಪ್ರ.ದ. ಸಹಾಯಕ ಐ ಆರ್ ಭಜಂತ್ರಿಯವರಿಗೆ ನವಲಗುಂದ ರೈತರು ಮನವಿ ಸಲ್ಲಿಸಿದರು.
ಈ ವೇಳೆ ಮಲ್ಲಪ್ಪ ಹಳ್ಳದ ಮಾತನಾಡಿ ಪಟ್ಟಣದ ಎಪಿಎಂಸಿ ಉಪಮಾರುಕಟ್ಟೆಯಲ್ಲಿ ಪ್ರತಿ ಗುರುವಾರ ನಡೆಯುತ್ತಿರುವ ದನಗಳ ಸಂತೆಯಲ್ಲಿ ರೈತರು ತಮಗೆ ಬೇಡವಾದ ಅಥವಾ ಕುಟುಂಬ ನಿರ್ವಹಣೆಗಾಗಿ ತಮ್ಮಲ್ಲಿರುವ ಎತ್ತು ಎಮ್ಮೆಆಕಳುಗಳನ್ನು ಮಾರಾಟ ಮಾಡುತ್ತಾ ಬಂದಿರುತ್ತಾರೆ.
ಆದರೆ ಇತ್ತೀಚಿನ ಕೆಲವು ದಿನಗಳಿಂದ ಈ ಮಾರುಕಟ್ಟೆಯಲ್ಲಿ ದನ ಕಟುಕರ ಹಾವಳಿಯಂದಾಗಿ ರೈತ ಆಕಳು, ಎಮ್ಮೆ ಎತ್ತುಗಳಿಗೆ ಸರಿಯಾದ ಬೆಲೆಗಳು ಸಿಗುತ್ತಿಲ್ಲ. ಮೊದಲೇ ಮಳೆ,ಬೆಳೆ ಕೊರತೆಯಿಂದ ಬರಗಾಲದ ಭಯದಿಂದ ಬದುಕುತ್ತಿರುವ ರೈತ ಸಮುದಾಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲೇಶ ಉಪ್ಪಾರ ಮಾತನಾಡಿ ನಗರವೂ ಸೇರಿದಂತೆ ತಾಲ್ಲೂಕಿನ ರೈತರು ತಮ್ಮ ದನಕರುಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಬರುವ ದನ ಕಟುಕರು ಅತೀ ಕಡಿಮೆ ಬೆಲೆ ನಿಗದಿ ಪಡಿಸುತ್ತಾರೆ. ಜತೆಗೆ ಅವರು ನಿಗದಿ ಪಡಿಸಿದ ಬೆಲೆ ಹೊರತಾಗಿ ಬೇರೆಯಾವ ದಲಾಲರಾಗಲಿ ಕಟಗರಾಗಲಿ ಹೆಚ್ಚಿನ ಬೆಲೆಗೆ ಕೊಂಡುಕೊಳ್ಳದಂತೆ ನೋಡಿಕೊಳ್ಳುತ್ತಾರೆ ಹೀಗಾಗಿ ರೈತರು ಅನಿವಾರ್ಯವಾಗಿ ಅವರು ಕೇಳಿದ ಬೆಲೆಗೆ ಮಾರಾಟ ಮಾಡಬೇಕು ಇಲ್ಲವಾದಲ್ಲಿ ಮನೆಗೆ ಮರಳಿ ಬರುವಂತಹ ಪರಿಸ್ಥಿತಿ ಬಂದಿದೆ ಇದನ್ನು ಕೊಡಲೇ ಸರಿಪಡಿಸದಿದ್ದರೆ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಯಲ್ಲಪ್ಪ ದಾಡಿಬಾಯಿ, ಸಿದ್ದಪ್ಪ ಹೂಗಾರ, ಮುದ್ದಪ್ಪ ಡಾಲಿನ, ನಾಗರಾಜ್ ದೊಡಮನಿ, ಸಿದ್ದಪ್ಪ ಕೊಳಲಿನ, ಸುರೇಶ ಮುಗಣ್ಣವರ, ಗುರಪ್ಪ ಗಡ್ಡಿ, ತಿಪ್ಪಣ್ಣ ಬಳ್ಳೊಳ್ಳಿ, ನಿಂಗಪ್ಪ ತೋಟದ, ಗಂಗಪ್ಪ ಸಂಗಟಿ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು.