ದಲಿತ ಸಿಎಂ ಮಾಡಲು ಒತ್ತಾಯ

ಕೋಲಾರ,ಮಾ,೧೫- ರಾಜ್ಯದಲ್ಲಿ ಎಲ್ಲಾ ಪಕ್ಷಗಳಿಂದ ಸೇರಿ ಒಟ್ಟು ೩೬ ದಲಿತ ಶಾಸಕರು ಇದ್ದಾರೆ ಅವರೆಲ್ಲರೂ ದಲಿತರ ಬಗ್ಗೆ ಕಾಳಜಿ ಇದ್ದದ್ದೇ ಆದರೆ ಎಲ್ಲರೂ ಒಟ್ಟಿಗೆ ಸೇರಿ ರಾಜ್ಯದಲ್ಲಿ ದಲಿತ ಸಿಎಂ ಮಾಡಬೇಕೆಂದು ಕೇಳಲಿ ಯಾರು ದಲಿತ ಸಿಎಂ ಮಾಡುತ್ತಾರೋ ಅವರಿಗೆ ನನ್ನ ವೋಟು. ಅದು ಯಾವುದೇ ಪಕ್ಷವಾಗಲಿ ಎಂದು ಕೆಜಿಎಫ್ ಮಾಜಿ ಶಾಸಕ ಎಸ್.ರಾಜೇಂದ್ರನ್ ತಿಳಿಸಿದರು.
ನಗರದ ರಂಗಮಂದಿರದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಸ್ವಾಭಿಮಾನಿ ಮತದಾರರ ಜಾಗೃತಿ ಸಮಿತಿಯಿಂದ ದಲಿತ ಮುಖ್ಯಮಂತ್ರಿಗಾಗಿ ಒತ್ತಾಯಿಸಿ ಸ್ವಾಭಿಮಾನಿ ದಲಿತಾಂದೋಲನ ಸಮಾವೇಶ ಹಾಗೂ ಹೊರಗಿನ ಅಭ್ಯರ್ಥಿಗಳನ್ನು ಸೋಲಿಸಿ ಸ್ಥಳೀಯ ಅಭ್ಯರ್ಥಿಯನ್ನು ಗೆಲ್ಲಿಸಿ ಕೋಲಾರ ಕ್ಷೇತ್ರವನ್ನು ರಕ್ಷಿಸಿ ಅಭಿಯಾನ ಉದ್ದೇಶಿಸಿ ಮಾತನಾಡಿ, ದಲಿತರಿಗೆ ಯಾರೋ ಅನ್ಯಾಯ ಮಾಡುತ್ತಾರೋ ಅವರನ್ನು ಸೋಲಿಸಿ. ಆದರೆ ಕೋಲಾರದಲ್ಲಿ ಸಿದ್ದರಾಮಯ್ಯ ಒಬ್ಬರನ್ನೇ ಗುರಿಯಾಗಿಸಿ ಸೋಲಿಸುವುದಲ್ಲ, ದಲಿತರಿಗೆ ಕಾಂಗ್ರೆಸ್ ಪಕ್ಷ ಎಷ್ಟು ವರ್ಷಗಳಿಂದ ಮೋಸ ಮಾಡಿದ್ದಾರೆ, ದಲಿತರು ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬಾರದು ಎಂದು ಪ್ರಚಾರ ಮಾಡಿ ನಾನು ಕೂಡ ಬೆಂಬಲ ನೀಡುತ್ತೇನೆ ಎಂದು ಘೋಷಿಸಿದರು.
ಇಲ್ಲಿಂದಲೇ ನಾವು ಎಲ್ಲರೂ ಒಗ್ಗಟ್ಟಿನಿಂದ ಯಾರಿಗೆ ಮತ ಹಾಕಬೇಕೆಂದು ಹೇಳಿ ಬಿಜೆಪಿ ಅಪಾಯಕಾರಿ ಪಕ್ಷ. ಮೊದಲು ಹಿಜಾಬ್ ಹೆಸರಿನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ತೊಂದರೆ ಕೊಟ್ಟರು. ಆಮೇಲೆ ಮತಾಂತರ ಹೆಸರಿನಲ್ಲಿ ಕ್ರೈಸ್ತರಿಗೆ ತೊಂದರೆ ಕೊಟ್ಟರು ದಲಿತರನ್ನು ಗುಲಾಮರಾಗಿ ಮಾಡಿಕೊಂಡು ಮತಬ್ಯಾಂಕ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಕೆಜಿಎಫ್ ಕ್ಷೇತ್ರದಲ್ಲಿ ಗೆದ್ದು ಜೈಲಿಗೆ ಹೋದ ಕಳ್ಳ ಮಾಜಿ ಶಾಸಕನಿದ್ದಾನೆ, ಈಗಿನ ಶಾಸಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಇದುವರೆಗೆ ಬಂಧಿಸಿಲ್ಲ. ಸಾಮಾನ್ಯ ದಲಿತರಾಗಿದ್ದರೆ ಏನು ಮಾಡುತ್ತಿದ್ದರು, ಅವರು ಬಟ್ಟೆ ತೊಟ್ಟ ಶ್ರೀಮಂತರು, ನಾವು ಬಟ್ಟೆ ಇಲ್ಲದ ಬಡ ದಲಿತರು ಆರ್.ಪಿ.ಐನಿಂದ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಅಂಬೇಡ್ಕರ್ ವಾದಿ, ನಾನು ಯಾರ ಗುಲಾಮನೂ ಅಲ್ಲ. ಕೋಟಿ ಕೋಟಿ ಇರುವವರು ಮೋದಿ ಮುಖ ನೋಡಿ ವೋಟು ಹಾಕು ಎನ್ನುತ್ತಾರೆ. ಆದರೆ, ಅಂಬೇಡ್ಕರ್ ಮುಖ ನೋಡಿ ನನಗೆ ವೋಟು ಹಾಕಿ ಎಂದು ಹೇಳಿದರು.
ಚಿಂತಕ ಪ್ರೊ.ಎ.ಹರಿರಾಂ ಮಾತನಾಡಿ, ರಾಜಕೀಯ ಅಧಿಕಾರದಿಂದ ಮಾತ್ರ ದಲಿತರ ಸಮಸ್ಯೆಗೆ ಪರಿಹಾರವಿದೆ. ರಾಜಕೀಯ ಅಧಿಕಾರ ಮಾಸ್ಟರ್ ಕೀ ಎಂಬುದಾಗಿ ಅಂಬೇಡ್ಕರ್ ಹೇಳಿದ್ದರು. ಆದರೆ, ದರೋಡೆಕೋರರ ಕೈಗೆ ನಾವು ಈ ಮಾಸ್ಟರ್ ಕೀ ಕೊಟ್ಟಿದ್ದೇವೆ ಅಂಬೇಡ್ಕರ್‌ರನ್ನು ಕಾಂಗ್ರೆಸ್ಸಿಗರು ಸೋಲಿಸಿದರು. ಈಗ ಹಲವು ಪಕ್ಷಗಳಲ್ಲಿ ಕುಟುಂಬದವರೆಲ್ಲಾ ರಾಜಕೀಯದಲ್ಲಿದ್ದಾರೆ. ಆದರೆ, ದಲಿತರು ೭೫ ವರ್ಷಗಳಿಂದ ವೋಟ್ ಬ್ಯಾಂಕ್ ಆಗಿದ್ದೇವೆ. ಸರಾಯಿ ಪೊಟ್ಟಣಕ್ಕೆ, ಸೀರೆ, ಮೂಗಿನ ನತ್ತಿಗೆ ಮತ ಹಾಗೂ ಸ್ವಾಭಿಮಾನ ಮಾರಿಕೊಳ್ಳುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಲಿಂಗಾಯತ ಸಿ.ಎಂ ಅನ್ನು ಹೆಚ್ಚು ಮಾಡಿದ್ದು ಕಾಂಗ್ರೆಸ್, ಹೆಚ್ಚು ಮಂತ್ರಿ ಮಾಡಿದ್ದು ಕಾಂಗ್ರೆಸ್. ಆ ಸಮುದಾಯಕ್ಕೆ ಉದ್ಯೋಗ ಹೆಚ್ಚು ನೀಡಿದ್ದು ಕಾಂಗ್ರೆಸ್, ಮಠಾಧಿಪತಿಗಳಿಗೆ ಭೂಮಿ ಸಹಾಯ ಮಾಡಿದರು. ಈಗ ಲಿಂಗಾಯತರು ಕಾಂಗ್ರೆಸ್ ಗೆ ಒದ್ದು ಮತ್ತೊಂದು ಪಕ್ಷಕ್ಕೆ ಬೆಂಬಲ ನೀಡಿ ಲಾಭ ಪಡೆಯುತ್ತಿದ್ದಾರೆ. ಆದರೆ, ೭೦ ವರ್ಷಗಳಿಂದ ದಲಿತರು ಯಾವುದೇ ಸಹಾಯ ಪಡೆಯದೆ ಕಾಂಗ್ರೆಸ್ ಬೆಂಬಲಿಸುತ್ತಾರೆ. ಮುಂದೆಯೂ ಅವರನ್ನೇ ಬೆಂಬಲಿಸಬೇಕೇ ಯೋಜನೆ ಮಾಡಿ ಮುಂದೆ ರಾಜಕೀಯ ಆಗಿ ಪರ್ಯಾಯ ಚಳವಳಿ ಮಾಡಬೇಕು. ಕೋಲಾರ ಜಿಲ್ಲೆಯಲ್ಲಿ ಮುಸ್ಲಿಂ, ದಲಿತರು ಸೇರಿ ೧ ಲಕ್ಣಕ್ಕೂ ಅಧಿಕ ಮತದಾರರು ಇದ್ದಾರೆ. ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳಿ. ಆದರೆ, ಹಣದ ಮುಂದೆ ನಮ್ಮ ಸಿದ್ಧಾಂತ ನಡೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಖಂಡ ದಲಿತ್ ನಾರಾಯಣಸ್ವಾಮಿ ಮಾತನಾಡಿ, ಡೋಂಗಿ ನಾಯಕರು ಸಿದ್ಧರಾಮಯ್ಯರನ್ನು ಕೋಲಾರ ಕ್ಷೇತ್ರಕ್ಕೆ ಬರಮಾಡಿಕೊಳ್ಳುತ್ತಿದ್ದಾರೆ, ಕೋಲಾರಕ್ಕೆ ಯಾರೂ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ದಲಿತ ವಿರೋಧಿ. ಹೀಗಾಗಿ, ಸಮಸ್ಯೆಗೆ ಸ್ಪಂದಿಸುವ ಸ್ಥಳೀಯ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದರು.