ದಲಿತ ಸಿಎಂ ಪಿಕ್ಚರ್ರಿ ಲೀಸ್ ಆಗಲಿಲ್ಲ

ಬೆಂಗಳೂರು, ನ. ೬- ಕಾಂಗ್ರೆಸ್‌ನಲ್ಲಿ ದಲಿತ ಮುಖ್ಯಮಂತ್ರಿ ವಿಚಾರ ಹಲವು ವರ್ಷಗಳಿಂದ ಓಡುತ್ತಲೇ ಇದೆ. ಆದರೆ ಪಿಕ್ಚರ್ ರಿಲೀಸ್ ಆಗಲಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಸಿಎಂ ವಿಚಾರ ೨೦೧೩ ರಿಂದಲೂ ಓಡುತ್ತಲೇ ಇದೆ. ಕಳೆದ ೫ ವರ್ಷ ಅದೇ ಓಡಿದ್ದು, ಆದರೆ ಪಿಕ್ಚರ್ ರಿಲೀಸ್ ಆಗಲಿಲ್ಲ. ಹಿಂದೆ ಮಲ್ಲಿಕಾರ್ಜುನ ಖರ್ಗೆಯವರಿಗೂ ಅವಕಾಶ ಸಿಗಲಿಲ್ಲ. ಡಾ. ಜಿ. ಪರಮೇಶ್ವರ್ ಅವರು ೮ ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಅವರಿಗೂ ಸಿಎಂ ಆಗೋದಕ್ಕೆ ಆಗಲಿಲ್ಲ ಎಂದು ಹೇಳಿದರು.
ಮುಂದಿನ ೨ ವರ್ಷದ ನಂತರ ಅಧಿಕಾರ ಹಂಚಿಕೆ ಆಗುತ್ತದೋ, ಇಲ್ಲವೋ ಎಂಬುದನ್ನು ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ಈಗ ಮಾತನಾಡುವುದು ಬೇಡ ಎಂದರು.
ವಾಲ್ಮೀಕಿ ಸಮುದಾಯದ ಸ್ವಾಮೀಜಿಯವರು ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗಲು ಅರ್ಹರಿದ್ದಾರೆ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದರಲ್ಲಿ ಹೊಸದೇನೂ ಇಲ್ಲ, ಹಳೆಯದೇ. ಸ್ವಾಮೀಜಿ ಮೊದಲಿನಿಂದಲೂ ಸಮುದಾಯದ ಪರವಾಗಿ ಈ ರೀತಿ ಮಾತನಾಡಿದ್ದಾರೆ ಎಂದರು.
ಜಾತಿ ಗಣತಿ ವರದಿಗೆ ಒಕ್ಕಲಿಗ, ಲಿಂಗಾಯತ ಸಮುದಾಯ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಾತಿಗಣತಿ ವರದಿ ಮೊದಲು ಸರ್ಕಾರಕ್ಕೆ ಸಲ್ಲಿಕೆಯಾಗಲಿ. ನಂತರ ಅದನ್ನು ಸಚಿವ ಸಂಪುಟದಲ್ಲಿ ಮಂಡಿಸಬೇಕು. ಎರಡೂ ಸದನದಲ್ಲೂ ಚರ್ಚೆಯಾಗಬೇಕು. ಜಾತಿ ಗಣತಿಯಲ್ಲಿ ತಪ್ಪಿದ್ದರೆ ಮತ್ತೊಮ್ಮೆ ಸರಿಪಡಿಸಲಿ ಎಂದ ಅವರು, ಜಾತಿ ಗಣತಿ ಬಗ್ಗೆ ಸಾರ್ವಜನಿಕ ಚರ್ಚೆಯಾದರೆ ಒಳ್ಳೆಯದು ಎಂದರು.
ಮುಖ್ಯಮಂತ್ರಿಗಳ ಉಪಹಾರ ಸಭೆಗೆ ಅನಾರೋಗ್ಯದಿಂದ ಹಾಜರಾಗಿರಲಿಲ್ಲ. ಮುಖ್ಯಮಂತ್ರಿಗಳಿಗೆ ತಿಳಿಸಿಯೇ ಗೈರು ಹಾಜರಾಗಿದ್ದೆ. ಗೈರು ಹಾಜರಿಗೆ ಅಪಾರ್ಥ ಕಲ್ಪಿಸುವುದು ಬೇಡ. ನಾನು ಗೈರಾಗಿದ್ದರೂ ಸಭೆಯ ತೀರ್ಮಾನ ನನಗೂ ಅನ್ವಯವಾಗುತ್ತದೆ. ಯಾರೂ ಬಹಿರಂಗವಾಗಿ ಮಾತನಾಡಬಾರದು ಎಂಬುದು ಸರಿಯಿದೆ. ಮಾತನಾಡಿದರೆ ಸುಮ್ಮನೆ ಗೊಂದಲ ಉಂಟಾಗುತ್ತದೆ ಎಂದರು.
ಪ್ರಧಾನಿ ಮೋದಿಯವರು ಮಧ್ಯೆ ಪ್ರದೇಶದಲ್ಲಿ ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿ ಉಳಿಯುತ್ತಾರೋ ಗೊತ್ತಿಲ್ಲ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಹೀಗೆಲ್ಲಾ ಮಾತನಾಡುವುದು ಸಹಜ. ಇನ್ನೊಂದು ಪಕ್ಷದವರು ಮತ್ತೊಂದು ಪಕ್ಷವನ್ನು ಸಹಿಸಿಕೊಳ್ಳಲ್ಲ. ಅವರು ಆರೋಪ ಮಾಡಿದ್ದಾರೆ ಎಂದ ತಕ್ಷಣ ಅದನ್ನು ಒಪ್ಪಿಕೊಳ್ಳಬೇಕೋ ಎಂದೇನಿಲ್ಲ. ನಾವು ಬಿಜೆಪಿ ವಿರುದ್ಧ ಶೇ. ೪೦ರ ಕಮೀಷನ್ ಆರೋಪ ಮಾಡಿದ್ದೆವು. ಅದನ್ನು ಅವರು ಒಪ್ಪಿಕೊಂಡರಾ ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.