ದಲಿತ ಸಾಹಿತ್ಯಕ್ಕೆ ಶಹಾಬಾದ ಬುನಾದಿ

ಶಹಾಬಾದ್:ಎ.15:ಇಂದು ಸಾಹಿತ್ಯರಂಗದಲ್ಲಿ ಬಂಡಾಯ, ದಲಿತ ಸಾಹಿತ್ಯ ಬೆಳೆದಿರುವುದು ಶಹಾಬಾದ ನೆಲಯಲ್ಲಿಯೇ ಎಂದು ಚಿಂತಕ ಕೆ.ಎಸ್.ಬಂಧು ಅವರು ಹೇಳಿದರು. ಅವರು ನಗರದ ಡಾ.ಅಂಬೇಡ್ಕರ ಅವರ ಪುತ್ಥಳಿ ಆವರಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತೋತ್ಸವ ಸಮಿತಿಯಿಂದ ನಡೆದ ಕವಿಗೋಷ್ಠಿ ಕಾರ್ಯಕ್ರಮ ಚಾಲನೆ ನೀಡಿ ಮಾಡನಾಡಿದರು. ಶಹಾಬಾದ ಮಣ್ಣು ಜಾತಿ, ಧರ್ಮ ಮೀರಿ ಎಲ್ಲರೂ ಒಂದೇ ಭಾವನೆಯಿಂದ ಪರಸ್ಪರ ಸಹಕಾರ, ಸಹೋದರತೆ ಭಾವನೆಯಿಂದ ಕೂಡಿ ಬಾಳುವ ಊರು ಇಲ್ಲಿಂದಲೇ ದಲಿತ ಸಾಹಿತ್ಯವು ಬೆಳೆದು ಇಂದು ಹೆಮ್ಮರವಾಗಿದೆ. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ಅವರ ವಿಚಾರ, ಸಂದೇಶ ಎಲ್ಲರಿಗೂ ಮುಟ್ಟಿಸಬೇಕು, ನಮ್ಮ ಮಕ್ಕಳಿಗೆ ಉನ್ನತ ಮಟ್ಟದಲ್ಲಿ ವಿದ್ಯಾಭ್ಯಾಸ ನೀಡಿ ದೊಡ್ಡ ದೊಡ್ಡ ಹುದ್ದೇಗೆ ಹೋಗುವಂತೆ ಮಾಡಬೇಕು ಎಂದು ಹೇಳಿದರು. ಹಿರಿಯ ವೈದ್ಯ ಡಾ.ವೀರನಾಥ ಕನಕ, ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ, ಶರಣಗೌಡ ಪಾಟೀಲ್, ಸಮಿತಿ ಗೌರವ ಅಧ್ಯಕ್ಷ ಮಲ್ಲಣ್ಣ ಮರತೂರ, ನ್ಯಾಯವಾದಿ ಮಲ್ಲೇಶಿ ಸಜ್ಜನ, ಬಸವರಾಜ ನಂದಿಧ್ವಜ, ಸತೀಶ ಕೋಬಾಳಕರ್, ಅಭಿಷೇಕ, ವೇದಿಕೆಯಲ್ಲಿದ್ದರು. ಸಮಿತಿ ಅಧ್ಯಕ್ಷ ಪಿ.ಎಸ್.ಮೇತ್ರಿ ಅಧ್ಯಕ್ಷತೆ ವಹಿಸಿದರು. ಕವಿಗಳಾದ ಡಾ.ಚಿದಾನಂದ ಕುಡನ್, ಮರೆಪ್ಪ ಮೇತ್ರಿ, ಬಸವರಾಜ ಮುಗಳಖೋಡ, ರಾಜಶೇಖರ ದೇವರಮನಿ, ಶಶಿಕಾಂತ ಮಡಿವಾಳ, ಹಣಮಂತ ಕುಂಬಾರ, ಮರಲಿಂಗ ಯಾದಗಿರಿ, ರವಿಂದ್ರ ಬೆಳಮಗಿ ಹಾಗೂ ಇತರರು ಕವನ ವಾಚನ ಮಾಡಿದರು. ಬಸವರಾಜ ಮಯೂರ ನಿರೂಪಿಸಿದರು, ಪ್ರವೀಣ ರಾಜನ ಸ್ವಾಗತಿಸಿದರು.