ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ


ಮೈಸೂರು,ನ.18:- ಪ್ರಚೋದನಕಾರಿ, ಸಂವಿಧಾನ ವಿರೋಧಿ, ಕಾನೂನು ಬಾಹಿರ ಹೇಳಿಕೆಗಳನ್ನು ನೀಡುತ್ತ, ಕೋಮುದ್ವೇಷ ಹರಡುವ ಮತ್ತು ಸಮಾಜದಲ್ಲಿ ಶಾಂತಿ ಕದಡುತ್ತಿರುವ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಇತರರ ಹೇಳಿಕೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ಇಂತಹ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಹಂಸಲೇಖ ಅವರ ಸಮಾನತೆಪರ, ಭ್ರಾತೃತ್ವದ ಪರವಾದ ಮಾತುಗಳು ಬ್ರಾಹ್ಮಣಶಾಹಿ ಮನಸ್ಸುಗಳ ಎದೆಯನ್ನು ಇರಿದಂತಿದೆ.
ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಸಲೇಖರವರು ಕ್ಷಮೆಯಾಚಿಸುವಂತೆ ಒತ್ತಡ ಹಾಗೂ ಭಯದ ವಾತಾವರಣವನ್ನು ನಿರ್ಮಿಸಲಾಗಿದೆ. ಇವರ ವಿರುದ್ಧ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿರುವುದು ದುರಂತವೇ ಸರಿ. ಹಾಗಿದ್ದರೆ ಹಂಸಲೇಖರವರು ಪ್ರಶ್ನಿಸಿರುವ ಜಾತೀಯತೆಯು ನ್ಯಾಯೋಚಿತವಾದದುದೇ ಎಂದು ಪ್ರಶ್ನಿಸಬೇಕಾಗಿದೆ ಎಂದರು.
ಬಿಟ್ ಕಾಯಿನ್ ಹಗರಣ ಕುರಿತಂತೆ ಪ್ರಿಯಾಂಕ್ ಖರ್ಗೆಯವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಸರ್ಕಾರ ವ್ಯವಸ್ಥಿತವಾಗಿ ತಮ್ಮ ಅಭಿಮಾನಿಗಳ ಮೂಲಕ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಅನವಶ್ಯಕವಾಗಿ ನ್ಯಾಯಯುತವಾದ ಹಂಸಲೇಖರ ಹೇಳಿಕೆಯನ್ನು ನೆಪವಾಗಿಟ್ಟುಕೊಂಡು ಹಿಂದುಳಿದ ಶೋಷಿತ ಸಮುದಾಯಗಳ ಭಾವನೆಗಳ ವಿರುದ್ಧವಾಗಿ ಹೇಳಿಕೆಯನ್ನು ನೀಡುವುದು, ದೂರು ದಾಖಲಿಸುವುದು ಹಲ್ಲೆ ನಡೆಸುವುದು, ಭಯಹುಟ್ಟಿಸುವುದರ ಮೂಲಕ ಸತ್ಯ ಹೇಳುವವರ ಬಾಯಿ ಮುಚ್ಚಿಸುವ ನಡೆಯನ್ನು ಖಂಡಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಚೋರನಹಳ್ಳಿ ಶಿವಣ್ಣ, ಕೆ.ವಿ.ಮಹೇಂದ್ರ, ಕಿರಂಗೂರು ಸ್ವಾಮಿ, ಯಡದೊರೆ ಮಹದೇವಯ್ಯ, ಹಾರೋಹಳ್ಳಿ ನಟರಾಜ್, ಶಿವಮೂರ್ತಿ ಶಂಕರಪುರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.