ದಲಿತ ಸಂಘರ್ಷ ಸಮಿತಿ ಎರಡು ದಿನದ ಧರಣಿ ಅಂತ್ಯ

ಸಿರವಾರ,ಮಾ.೧೨- ತಾಲೂಕಿನ ಗಣದಿನ್ನಿ ಗ್ರಾಮದಲ್ಲಿ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ಸರಕಾರಕ್ಕೆ ಭೂಮಿ ಮಾರಾಟ ಮಾಡಿದ ಭೂ-ಮಾಲೀಕರು, ಪಂಚಾಯಿತಿ ಆಡಳಿತಕ್ಕೆ ಹಸ್ತಾಂತರ ಮಾಡದೆ, ಆಕ್ರಮವಾಗಿ ಸಾಗುವಳಿ ಮಾಡುತ್ತಿರುವ ಭೂ-ಮಾಲೀಕರು ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ, ಶಿಸ್ತು ಕಾನೂನು ಕ್ರಮ ಜರುಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಬಣದ) ಮುಖಂಡರು ತಾಲೂಕಿನ ಗಣದಿನ್ನಿ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಗುರುವಾರದಿಂದ ೨ ದಿನಗಳ ಕಾಲ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಸ್ಥಾಪಿತ ಬಣದ) ಮುಖಂಡರು ಧರಣಿ ಸತ್ಯಾಗ್ರಹ ನಡೆಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒಕ್ಕೊರಲಿನಿಂದ ಆಗ್ರಹಿಸಿದರು.
ತಾ.ಪಂ ಇಓ ಉಮೇಶ, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವಿ ಪತ್ರವನ್ನು ಸ್ವಿಕರಿಸಿದ ಹಿನ್ನೆಲೆಯಲ್ಲಿ ಎರಡು ದಿನಗಳ ಧರಣಿ ಮುಕ್ತಾಯವಾಯಿತು. ಈ ಕುರಿತು ದಲಿತ ಸಂಘರ್ಷ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಂ.ಮನೋಹರ್ ಮಾತನಾಡಿ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿವೇಶನಗಳಿಗೆ ಕಳೆದ ೨೦೧೮ರಲ್ಲಿ ಗಣದಿನ್ನಿ ಗ್ರಾಮದ ಶಕುಂತಲಮ್ಮ ತಂದೆ ಬಸ್ಸಣ್ಣ ಚಿತ್ರಾಲ್ ಅವರ ಮಾಲೀಕತ್ವದ, ೦೫ ಎಕರೆ ಜಮೀನನ್ನು ಆಶ್ರಯ ಮನೆಗಳ ನಿರ್ಮಾಣಕ್ಕಾಗಿ, ಭೂಮಿ ಮಾಲೀಕರು ಸರಕಾರಕ್ಕೆ ಹಣಕ್ಕೆ ಮಾರಾಟ ಮಾಡಿದ್ದಾರೆ. ಆದರೆ ಇದುವರೆಗೂ ಪ೦ಚಾಯಿತಿಗೆ ಹಸ್ತಾಂತರ ನೀಡದ ಮತ್ತು ಫಲಾನುಭವಿಗಳಿಗೆ ಹಂಚಿಕೆ ಮಾಡದೆ ಜಮೀನಿನ್ನು ಸಾಗುವಳಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಆದ್ದರಿಂದ ಕೂಡಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಆಶ್ರಯ ಮನೆಗಳ ನಿರ್ಮಾಣಕ್ಕೆ ಮಂಜೂರಾದ ಭೂಮಿ ಯನ್ನು ಗ್ರಾಮ ಪಂಚಾಯಿತಿ ಅಧೀನಕ್ಕೆ ವಶಪಡಿಸಿಕೊಂಡು, ಎಸ್ಸಿ-ಎಸ್ಟಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಗಣದಿನ್ನಿ ಗ್ರಾಮ ಪಂಚಾಯಿತಿಯ ೧೫ನೇ ಹಣಕಾಸಿನಲ್ಲಿ ಅಂಗವಿಕಲರಿಗೆ ಮೀಸಲಿಟ್ಟ ಅನುದಾನದಲ್ಲಿ ಭ್ರಷ್ಟಾಚಾರ ಜರುಗಿದ್ದು, ಸೂಕ್ತ ತನಿಖೆ ಕೈಗೊಳ್ಳಬೇಕು ಮತ್ತು ಗ್ರಾಮದ ಕುಡಿಯುವ ನೀರಿನ ಕೆರೆಯ ಹೂಳೆತ್ತಿ ನೀರು ತುಂಬಿಸಬೇಕು, ಮಹಿಳೆಯರಿಗೆ ಹೈಟೆಕ್ ಶೌಚಾಲಯ ನಿರ್ಮಾಣ ಸೇರಿದಂತೆ ಗಣಡಿ ಗ್ರಾಮಕ್ಕೆ ಮೂಲಭೂತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಸವ ರಾಜ್ ನಾಡಗಿ, ಮುಖಂಡರಾದ ರಮೇಶ್ ನಾಯಕ, ನರಸಿಂಗ್ ಗಣದಿನ್ನಿ, ಹನುಮಂತ ಗಣದಿನ್ನಿ, ಜಂಬಣ್ಣ ಸೇರಿದಂತೆ ಇತರರಿದ್ದರು.