ದಲಿತ ಸಂಘಟನೆಯಿಂದ ರಾಜ್ಯ ಹೆದ್ದಾರಿ ಬಂದ್


ದೇವದುರ್ಗ.ಜ.೨೫- ಕಲಬುರಗಿ ಜಿಲ್ಲೆಯ ಕೋಟಾನೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಆಗ್ರಹಿಸಿ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳು ಗುರುವಾರ ದಿಢೀರನೆ ರಾಜ್ಯ ಹೆದ್ದಾರಿ ಸಂಚಾರ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕೋಟಾನೂರು ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಗೆ ಅಪಮಾನ ಮಾಡಿರುವುದು ಖಂಡನೀಯ. ರಾಜ್ಯದಲ್ಲಿ ಅಂಬೇಡ್ಕರ್ ಸೇರಿ ಮಹಾನ್ ವ್ಯಕ್ತಿಗಳ ಮೂರ್ತಿ, ಪುತ್ಥಳಿಗಳಿಗೆ ಅಪಮಾನ ಮಾಡುವಂಥ ಘಟನೆಗಳು ಪದೇಪದೆ ನಡೆಯುತ್ತಿದ್ದು ರಾಜ್ಯ ಸರ್ಕಾರ ಕಾನೂನು ವೈಫಲ್ಯವೇ ಇದಕ್ಕೆ ಕಾರಣವಾಗಿದೆ. ಇಂಥ ಘಟನೆಯಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಇದರಿಂದ ಸಾಮಾಜಿಕ ಸಾಮರಸ್ಯ ಹಾಳಾಗಲಿವೆ.
ಘಟನೆ ನಡೆದು ಮೂರ್‍ನಾಲ್ಕು ದಿನ ಕಳೆದರೂ ಆರೋಪಿಗಳನ್ನು ತಕ್ಷಣ ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ನಾಮ್‌ಕೆ ಅವಸ್ತೆ ಎನ್ನುವಂತೆ ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ. ಕೂಡಲೇ ಘಟನೆ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು. ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು. ಮುಂದೆ ಇಂಥ ಘಟನೆಗಳು ನಡೆಯದಂತೆ ಎಚ್ಚರಿಕೆವಹಿಸಲು ಆರೋಪಿಗಳನ್ನು ಗಡಿಪಾರು ಮಾಡಬೇಕು. ಎಲ್ಲ ಮೂರ್ತಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ವಿವಿಧ ದಲಿತ ಸಂಘಟನೆಗಳ ಮುಖಂಡರಾದ ವಿಶ್ವನಾಥ್ ಬಲ್ಲಿದವ್, ಮೌನೇಶ, ಶಿವರಾಜ ಅಕ್ಕರಕಿ, ಜಾನಿ, ಶಾಂತಕುಮಾರ ಹೊನ್ನಟಗಿ, ಮಹಾಂತೇಶ ಭವಾನಿ, ಶಿವರಾಜ ರುದ್ರಾಕ್ಷಿ, ನಾಗರಾಜ ಮನ್ನಾಪುರ ಸೇರಿದಂತೆ ಇತರರಿದ್ದರು.

೨೫-ಡಿವಿಡಿ-೨