ದಲಿತ ವ್ಯಕ್ತಿಯ ಕೊಲೆ ಗ್ರಾಪಂ ಸದಸ್ಯನ ಸೆರೆ

ಮಂಡ್ಯ,ಮೇ.12-ರಸ್ತೆಬದಿ ಮಣ್ಣು ತುಂಬುವ ವಿಚಾರಕ್ಕೆ ಶುರುವಾದ ಗಲಾಟೆ ದಲಿತ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಳವಳ್ಳಿ ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯನನ್ನು ಬಂಧಿಸಲಾಗಿದೆ.
ಬೆಂಡರವಾಡಿಯ ಶಿವಕುಮಾರ್ ಕೊಲೆಯಾದವರು,ಕೃತ್ಯವೆಸಗಿದ ಅಶೋಕ್ ರಾಜೇ ಅರಸ್ ನನ್ನು ಕಿರುಗಾವಲು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಅಶೋಕ್ ರಾಜೇ ಅರಸ್ ರಸ್ತೆಬದಿ ಮಣ್ಣು ತುಂಬುವುದನ್ನ ತಡೆದು ಆಕ್ಷೇಪ ವ್ಯಕ್ತಪಡಿಸಿದ್ದ. ಇದೇ ವಿಚಾರವಾಗಿ ಮೃತ ಶಿವಕುಮಾರ್ ಹಾಗೂ ಅಶೋಕ್​ ನಡುವೆ ಜಗಳ ನಡೆದಿತ್ತು.
ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಹೊಡೆದಾಟ ನಡೆದಿದ್ದು, ಅಶೋಕ್ ಶಿವಕುಮಾರ್​ನನ್ನು ನೂಕಿ ಹಲ್ಲೆ ಮಾಡಿದ್ದಾನೆ.
ಈ ಸಂದರ್ಭ ಕೆಳಗೆ ಬಿದ್ದ ಶಿವಕುಮಾರ್ ತಲೆಗೆ ಗಂಭೀರ ಗಾಯವಾಗಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಅಶೋಕ್ ರಾಜೇ ಅರಸ್​ನನ್ನು ಕಿರುಗಾವಲು ಪೊಲೀಸರು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.