ದಲಿತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಹುಮನಾಬಾದ್:ಸೆ.21: ಬೇಡ ಜಂಗಮರ ಬೇಡಿಕೆ ಬೆಂಬಲಿಸಿದ ಶಾಸಕ ರಾಜಶೇಖರ ಪಾಟೀಲ್ , ಎಂಎಲ್‍ಸಿ ಡಾ . ಚಂದ್ರಶೇಖರ ಪಾಟೀಲ್ ಹಾಗೂ ಭೀಮರಾವ್ ಪಾಟೀಲ್ ಅವರ ಕ್ರಮವನ್ನು ವಿರೋಧಿಸಿ ದಲಿತ ಸಂಘಟನೆಗಳು ಪಟ್ಟಣದಲ್ಲಿ ನಡೆಸಿದ ಬೃಹತ್ ಪ್ರತಿಭಟನಾ ರಾಲಿಯು ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು . ದಲಿತ ಹೋರಾಟ ಕ್ರಿಯಾ ಸಮಿತಿ ಸಂಘಟಿಸಿದ್ದ ಈ ಪ್ರತಿಭಟನೆಯಲ್ಲಿ ದಲಿತ ಸಂಘಟನೆಗಳ ಪ್ರಮುಖರು , ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಬೆಂಬಲಿಸಿದರು . ಬಂದ್ ಕರೆ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕೆಲ ಅಂಗಡಿಗಳೂ ಮುಚ್ಚಿದ್ದವು . ಬಂದ್‍ಗೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಅಂಗಡಿ ಮುಚ್ಚಿಸುವ ಗೋಜಿಗೆ ಹೋಗದೆ , ಭಾರೀ ಸಂಖ್ಯೆಯಲ್ಲಿ ಸೇರಿ ಶಕ್ತಿ ಪ್ರದರ್ಶನ ಮಾಡಿದರು . ಶಾಸಕ ರಾಜಶೇಖರ ಪಾಟೀಲ್ ಮತ್ತು ಅವರ ಇಬ್ಬರು ಸೋದರರು ಹಾಗೂ ರಾಜ್ಯದ 80 ಜನ ಶಾಸಕರು ಬೇಡ ಜಂಗಮರ ಬೇಡಿಕೆ ಬೆಂಬಲಿಸಿ ಸರಕಾರಕ್ಕೆ ಪತ್ರ ಬರೆಯುವ ಮೂಲಕ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ . ಅಂಬೇಡ್ಕರ ವೃತ್ತದಲ್ಲಿ ಬಹಿರಂಗ ಸಭೆಯೂ ನಡೆಯಿತು . ಪರಮೇಶ್ವರ ಆರ್ಯ , ಅಂಕುಶ ಗೋಖಲೆ , ಶಿವಪುತ್ರ ಮಾಳಗೆ , ಗೌತಮ್ ಸಾಗರ , ಲಕ್ಷ್ಮೀಪುತ್ರ ಮಾಳಗೆ , ರವಿ ಹೊಸಳ್ಳೆ , ಬ್ಯಾಂಕ್‍ರೆಡ್ಡಿ , ಸೈಯದ್ ಯಾಸೀನ ಮತ್ತಿತರರು ಪಾಲ್ಗೊಂಡಿದ್ದರು