
ಸಂಜೆವಾಣಿ ವಾರ್ತೆ
ಸಿರಿಗೇರಿ ಏ.6. ಗ್ರಾಮದ ಸಿರಿಗೇರಮ್ಮ ದೇವಸ್ಥಾನದ ಹತ್ತಿರದ ಸಮುದಾಯ ಭವನದಲ್ಲಿ ನಿನ್ನೆ ಸಂಜೆ, ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಡಾ.ಬಾಬು ಜಗಜೀವನರಾಂ ರವರ 116ನೇ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ವಿದ್ಯಾರ್ಥಿ ಪರಿಷತ್‍ನ ಜಿಲ್ಲಾ ಸಂಚಾಲಕ ಎಚ್.ಲಕ್ಷ್ಮಣಭಂಡಾರಿ ಮತ್ತು ಪದಾಧಿಕಾರಿಗಳು ಮಾತನಾಡಿ ಜಗಜೀವನರಾಂ ರವರು ಹೊಂದಿದ್ದ ರಾಷ್ಟ್ರದ ಅಭಿವೃದ್ಧಿಯ ಕಲ್ಪನೆ, ರೈತರ ಜೀವನ ಸುಧಾರಣೆಗೆ ಹಸಿರುಕ್ರಾಂತಿಯ ಅನುಷ್ಠಾನ, ರಾಜಕೀಯ ಬದ್ಧತೆಯೊಂದಿಗೆ ಜೀವನದ ಸಾಧನೆ ಕುರಿತು, ಅವರ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಸಿದರು. ನಂತರ 10ನೇ ತರಗತಿ ವಿದ್ಯಾರ್ಥಿಗಳಾದ ಸುರೇಶ್, ವೆಂಕಟೇಶ, ದೇವರಾಜ, ಉಮೇಶ ಇವರು ಮಾತನಾಡಿ ಡಾ.ಬಿ.ಆರ್.ಅಂಬೆಡ್ಕರ್ ಮತ್ತು ಡಾ.ಬಾಬುಜಗಜೀವನರಾಂ ಇವರ ಚಿಂತನೆಗಳೊಂದಿಗೆ, ದೇಶದ, ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಒತ್ತು ನೀಡಿದ ಕುರಿತು, ದಲಿತ ವಿದ್ಯಾರ್ಥಿ ಪರಿಷತ್‍ನಿಂದ ನಡೆಸುತ್ತಿರುವ ರಾತ್ರಿ ಶಾಲೆಯಿಂದ ತಮ್ಮ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿರುವ ಕುರಿತು ತಿಳಿಸಿದರು. ಪದಾಧಿಕಾರಿಗಳಾದ ಉಮೇಶ್, ದೊಡ್ಡಬಸವ, ಸಣ್ಣಮಂಜು, ಸಂತೋಷ್‍ಕುಮಾರ, ಹಾಗೂ ರಾತ್ರಿಶಾಲೆ ಬೋದಕರಾದ ಶಕುಂತಲಾ ಹಾಗೂ ವಿದ್ಯಾರ್ಥಿಗಳು, ಪೋಷಕರು ಪಾಲ್ಗೊಂಡಿದ್ದರು.